ಮೂಡಿಗೆರೆ : ಬಣಕಲ್ ಸರ್ಕಾರಿ ಉರ್ದು ಶಾಲೆಯಲ್ಲಿ ಫನ್‍ಫೇರ್ ಕಾರ್ಯಕ್ರಮ…

352
firstsuddi

ಬಣಕಲ್ : ಬಣಕಲ್ ಸರಕಾರಿ ಉರ್ದು ಶಾಲೆಯ ಮಕ್ಕಳಿಗೆ ಬುಧವಾರದಂದು ಶಾಲೆಯಲ್ಲಿ ಫನ್‍ಫೇರ್ ಹಾಗೂ ಛದ್ಮವೇಷ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಫನ್‍ಫೇರ್ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಸಮಿತಿಯ ಅಧ್ಯಕ್ಷ ಮಹಮ್ಮದ್ ಇದ್ರೀಸ್ ನೆರವೇರಿಸಿ ಮಾತನಾಡಿ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಿಂತ ಮುಂದಿವೆ ಎಂಬುದಕ್ಕೆ ಇಂತಹ ಕಾರ್ಯಕ್ರಮ ನಡೆಸುವ ಮೂಲಕ ಸರ್ಕಾರಿ ಶಾಲೆಗಳು ಮಾದರಿಯಾಗಬೇಕು. ಮಕ್ಕಳಲ್ಲಿ ಸೂಕ್ತ ಪ್ರತಿಭೆ ಬೆಳಗಿಸುವುದಕ್ಕೆ ಛದ್ಮವೇಷ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ರಿಯಾನ ಬೇಗಂ ಮಾತನಾಡಿ, ಮಕ್ಕಳಿಗೆ ಇಷ್ಟವಾದ ತಿಂಡಿಗಳನ್ನು ತಯಾರಿಸಿ ಪೋಷಕರಿಗೆ ಮಾರಾಟ ಮಾಡುವ ಮೂಲಕ ವ್ಯಾಪಾರದ ಮಾರ್ಗವನ್ನು ಕಂಡುಕೊಳ್ಳಲು ಸಹಕಾರಿಯಾಗಿದೆ. ಮಕ್ಕಳು ಹಲವು ಬಗೆ ಬಗೆಯ ತಿಂಡಿಗಳನ್ನು ಮಾಡಿ ಮಳಿಗೆಗಳಲ್ಲಿ ಮಾರುತ್ತಿದ್ದು, ಶಾಲೆಯೇ ಒಂದು ತಿನಿಸುಗಳ ಜಾತ್ರೆಯ ಹಬ್ಬವಾಗಿ ಪರಿಣಮಿಸಿದೆ. ಮಕ್ಕಳಲ್ಲೂ ಸ್ಪರ್ಧಾತ್ಮಕ ಸಂಭ್ರಮ ಏರ್ಪಟ್ಟಿದ್ದು, ಇದರಿಂದ ಮಕ್ಕಳ ಬುದ್ಧಿ ಮೆತ್ತೆ ಚುರುಕುಗೊಳ್ಳುತ್ತದೆ ಎಂದರು.
ಶಾಲೆಯ ವಠಾರದಲ್ಲಿ ಹಲವು ಮಕ್ಕಳು ವಿವಿಧ ವೇಷಭೂಷಣಗಳಲ್ಲಿ ಮಿಂಚುತ್ತಿದ್ದರೆ, ಮತ್ತೊಂದೆಡೆ ಶಾಲೆಯ ವಠಾರ ತಿನಿಸುಗಳ ಜಾತ್ರೆಯಾಗಿ ಪರಿಣಮಿಸಿತು.
ಕಾರ್ಯಕ್ರಮದಲ್ಲಿ ಶಾಲಾ ಸಮಿತಿಯ ಶಫೀಉಲ್ಲಾ, ಆದಂ, ನೂರಾಹ್ಮದ್, ಎಜಾಜ್ ಅಹಮ್ಮದ್ ಹಾಗೂ ಶಾಲಾ ಶಿಕ್ಷಕರು ಮತ್ತು ಪೋಷಕರು ಜಮಾಯಿಸಿದ್ದರು.