ಮೂಡಿಗೆರೆ : 5 ಕೋಟಿ ವೆಚ್ಚದಲ್ಲಿ ಜಿಲ್ಲಾ ಉತ್ಸವ ನಡೆಸುವ ಬದಲು ಸರ್ಕಾರ ನೀಡುವ ಅನುದಾನವನ್ನು ನೆರೆಸಂತ್ರಸ್ತರಿಗೆ ನೀಡಿ : ಮಗ್ಗಲಮಕ್ಕಿ ಗಣೇಶ್.

324
firstsuddi

ಕೊಟ್ಟಿಗೆಹಾರ ; ಜಿಲ್ಲೆಯಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ಜಿಲ್ಲಾ ಉತ್ಸವ ನಡೆಸುವ ಬದಲು ಉತ್ಸವಕ್ಕೆ ಸರ್ಕಾರ ನೀಡುವ ಅನುದಾನವನ್ನು ನೆರೆಯಿಂದ ತತ್ತರಿಸಿ ತೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ನೆರೆಸಂತ್ರಸ್ತರಿಗೆ ನೀಡಲಿ ಎಂದು ಮೂಡಿಗೆರೆ ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಆಗ್ರಹಿಸಿದ್ದಾರೆ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಅವರು, ಕೆಲ ತಿಂಗಳ ಹಿಂದೆ ನೆರೆಪ್ರವಾಹದಿಂದ ಜನಜೀವನ ಸಂಪೂರ್ಣ ಹದಗೆಟ್ಟಿದೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮಂದಿ ಮನೆ, ಕೃಷಿಭೂಮಿಯನ್ನು ಕಳೆದುಕೊಂಡಿದ್ದಾರೆ. ರಸ್ತೆ, ವಿದ್ಯುತ್‍ಮಾರ್ಗ, ಸೇತುವೆ ಸೇರಿದಂತೆ ಹಾನಿ ಸಂಭವಿಸಿ ನೂರಾರು ಕೋಟಿಗಳ ನಷ್ಟ ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಪೆಬ್ರವರಿ 28 ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ಸುಮಾರು 5 ಕೋಟಿ ವೆಚ್ಚದಲ್ಲಿ ಮಾಡಲು ಹೊರಟಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು.
ರಾಜಕೀಯ ಪ್ರೇರಿತವಾಗಿ ಜಿಲ್ಲಾ ಉತ್ಸವವನ್ನು ನಡೆಸಲು ಸರ್ಕಾರ ಮುಂದಾಗಿದೆ. ಶೃಂಗೇರಿಯಲ್ಲಿ ಜಿಲ್ಲಾ ಕಸಾಪದಿಂದ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ಸಿ.ಟಿ ರವಿ ಅವರು ಕೇವಲ 5 ಲಕ್ಷ ಅನುದಾನ ನೀಡದಂತೆ ತಡೆದಿದ್ದರು. ಆದರೆ ಈಗ ಜಿಲ್ಲಾ ಉತ್ಸವಕ್ಕೆ 5 ಕೋಟಿ ವ್ಯಯಿಸಲಾಗುತ್ತಿದೆ. ನೆರೆಪ್ರವಾಹದ ನೋವಿನಲ್ಲಿರುವ ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲಾ ಉತ್ಸವ ನಡೆಸುವುದರಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ರಾಜಕೀಯ ಕಾರಣಕ್ಕೆ ಜಿಲ್ಲಾ ಉತ್ಸವವನ್ನು ಅದ್ದೂರಿಯಾಗಿ ನಡೆಸಿ ಜನರ ತೆರಿಗೆ ಹಣವನ್ನು ದುಂದು ಮಾಡದೇ ಸಂಕಷ್ಟದಲ್ಲಿರುವ ನೆರೆಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.