ಮೈಸೂರು: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಹೆತ್ತವರೇ ಅಪ್ರಾಪ್ತ ಮಗಳನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಶಾಲಿನಿ (17) ಕೊಲೆಗೀಡಾದ ಅಪ್ರಾಪ್ತೆ. ಶಾಲಿನಿ ಪಕ್ಕದ ಗ್ರಾಮದ ಮೆಲ್ಲಹಳ್ಳಿಯ ಯುವಕ ಮಂಜು ಅನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರು ದ್ವಿತೀಯ ಪಿಯುಸಿ ಓದುತ್ತಿದ್ದು, ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇವರಿಬ್ಬರ ಪ್ರೀತಿಗೆ ಶಾಲಿನಿ ಪೋಷಕರು ವಿರೋಧಿಸಿದ್ದರು.
ಹೀಗಾಗಿ ಪ್ರೇಮಿಗಳು ಮದುವೆಯಾಗಲು ನಿರ್ಧರಿಸಿದ್ದರು. ಪ್ರಿಯಕರನಿಗಾಗಿ ಶಾಲಿನಿ ಮನೆ ಬಿಟ್ಟಿದ್ದಳು. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಲೇರಿತ್ತು. ಪೊಲೀಸರ ಮುಂದೆ ಶಾಲಿನಿ ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು. ಹೀಗಾಗಿ ಶಾಲಿನಿ ಬಾಲಮಂದಿರಕ್ಕೆ ಸೇರಿಕೊಂಡಿದ್ದಳು. ಇತ್ತೀಚೆಗಷ್ಟೆ ಮಗಳನ್ನು ಪೋಷಕರಾದ ಸುರೇಶ್ ಹಾಗೂ ಬೇಬಿ ಮನೆಗೆ ಕರೆ ತಂದಿದ್ದರು.
ಸೋಮವಾರ ರಾತ್ರಿ ಶಾಲಿನಿ ಮತ್ತೆ ತನ್ನ ಪೋಷಕರೊಂದಿಗೆ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಹೋಗುವುದಾಗಿ ಹಠ ಮಾಡಿದಾಗ ಇದಕ್ಕೆ ಒಪ್ಪದ ಆಕೆಯ ಪೋಷಕರು ಮಗಳ ಕತ್ತು ಹಿಸುಕಿ ಕೊಲೆ ಮಾಡಿ ಆಕೆ ಪ್ರೀತಿಸುತ್ತಿದ್ದ ಯುವಕನ ಗ್ರಾಮದ ಜಮೀನೊಂದರ ಬಳಿ ಎಸೆದು ಹೋಗಿದ್ದಾರೆ. ಬಳಿಕ ನಿನ್ನೆ ಬೆಳಗ್ಗೆ ಇಬ್ಬರು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಬಂದು ಮಗಳನ್ನು ಕೊಲೆ ಮಾಡಿರುವದಾಗಿ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾರೆ.
ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










