ಮೊಬೈಲ್ ಟವರ್ ಏರಿ ಭಗ್ನಪ್ರೇಮಿಯ ಹುಚ್ಚಾಟ!

64
firstsuddi

ಮಂಗಳೂರು : ಪ್ರೇಮ ವೈಫಲ್ಯ ಹಿನ್ನೆಲೆ ಮೊಬೈಲ್ ಟವರ್ ಏರಿದ ಭಗ್ನಪ್ರೇಮಿಯೋರ್ವ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ ಘಟನೆ ನಗರದ ಅಡ್ಯಾರ್ ಬಳಿ ನಡೆದಿದೆ.

ನಗರದ ಹೊರವಲಯದ ಅಡ್ಯಾರ್ ನಿವಾಸಿ ಸುಧೀರ್ ಎಂಬಾತ ಹುಚ್ಚಾಟ ನಡೆಸಿದ ಭಗ್ನಪ್ರೇಮಿ. ಈತ ಫರಂಗಿಪೇಟೆಯ ಮಾರಿಪಳ್ಳದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ಈತನನ್ನು ನಿರ್ಲಕ್ಷಿಸಿದ್ದಳು. ಸುಧೀರ್ ಮಾತ್ರ ಆಕೆಯನ್ನು ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ಭಗ್ನಪ್ರೇಮಿ ಸುಧೀರ್ ಕಿರುಕುಳದಿಂದ ಬೇಸತ್ತ ಯುವತಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದಳು. ಇದರಿಂದ ಮನನೊಂದ ಸುಧೀರ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವಾಂತರ ಸೃಷ್ಟಿಸಿದ್ದಾನೆ.

ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸುಧೀರ್ ನನ್ನು ಟವರ್ ನಿಂದ ಇಳಿಸಲು ಹರಸಾಹಸಪಟ್ಟರೂ ಆತ ಇಳಿದಿರಲಿಲ್ಲ. ಕೊನೆಗೆ ಪೊಲೀಸರು ಆತ ಪ್ರೀತಿಸುತ್ತಿದ್ದ ಯುವತಿಯನ್ನೇ ಸ್ಥಳಕ್ಕೆ ಕರೆಸಿದರು. ಯುವತಿ ದೂರು ವಾಪಸ್ ತೆಗೆದುಕೊಳ್ಳುವೆ ಎಂದು ಹೇಳಿದ ಬಳಿಕ ಟವರ್ ನಿಂದ ಇಳಿದಿದ್ದಾನೆ.