ಮೊಬೈಲ್ ಬಳಕೆಯಿಂದ ಸಂಬಂಧಗಳು ದೂರವಾಗುತ್ತಿವೆ : ಎಂ.ಪಿ.ಕುಮಾರಸ್ವಾಮಿ

72
firstsuddi

ಕೊಟ್ಟಿಗೆಹಾರ : ಮಕ್ಕಳು ಇಂದಿನ ಸ್ಥಿತಿಗತಿಯಲ್ಲಿ ಅತಿ ಹೆಚ್ಚು ಮೊಬೈಲ್ ಬಳಕೆಯಿಂದ ಕುಟುಂಬದ ಸಂಬಂಧಗಳು ದೂರವಾಗುತ್ತಿವೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು

ಬಣಕಲ್ ಪ್ರೌಢಶಾಲೆಯಲ್ಲಿ ನಿನ್ನೆ ಸಂಜೆ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ವಾಣಿಜ್ಯದ ಕೇಂದ್ರಗಳಾಗದೇ ಉತ್ತಮ ಶಿಕ್ಷಣ ನೀಡುವ ಕೇಂದ್ರಗಳಾಗಬೇಕು. ಪೋಷಕರು ಮಕ್ಕಳ ಹಿತ ಕಾಯಬೇಕು. ಇಂದಿನ ಮಕ್ಕಳು ಗುರು ಹಿರಿಯರಿಗೆ ಗೌರವ ಕೊಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ರಾಜ್ ಶಾಲೆಯ ಸಂಚಿಕೆ ಮಲೆನಾಡ ಕಾಮಧೇನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಮೊಬೈಲ್ ಬಳಕೆಯಿಂದ ಕುಟುಂಬದಲ್ಲಿ ಸಂಬಂಧಗಳಿಗೆ ದಕ್ಕೆಯಾಗುತ್ತಿದೆ. ಮಕ್ಕಳು ಪರಸ್ಪರ ಸಮಾಜದಲ್ಲಿ ಬೆರೆಯದೇ ಮೊಬೈಲ್‍ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದರಿಂದ ಭವಿಷ್ಯಕ್ಕೆ ಇದು ಮಾರಕವಾಗುವ ಸಂಭವವಿದೆ. ಪೋಷಕರು ಮಕ್ಕಳ ನಿಗಾ ವಹಿಸಬೇಕು ಎಂದರು.

ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ಪೂಜಾರಿ ಮಾತನಾಡಿ ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಅಶಿಸ್ತು ಜೀವನೋತ್ಸವ ಮೊಬೈಲ್ ಬಳಕೆಯಿಂದ ಕಳೆದುಕೊಳ್ಳುತ್ತಿದ್ದಾರೆ. ಆಟ ಮನೋರಂಜನೆ ಕಾರ್ಯಕ್ರಮವಿಲ್ಲದೇ ಸಂಬಂಧಗಳನ್ನು ದೂರವಿರಿಸಿ ಮನೆಯಲ್ಲಿಯೇ ಮೊಬೈಲ್ ಬಂದಿಯಾಗುತ್ತಿರುವುದು ಆತಂಕದ ವಿಷಯವಾಗಿದೆ. ತಿದ್ದಿ ನಡೆದರೆ ಎಲ್ಲವೂ ಸುಗಮವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳಾದ ರತೀಶ್, ಕಾರ್ತಿಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಸಮಿತಿ ಅಧ್ಯಕ್ಷ ಬಿ.ಎ.ಜಯರಾಮ್ ಗೌಡ, ಕೋಶಾಧಿಕಾರಿ ಬಿ.ಕೆ.ಪೃಥ್ವಿ, ಬಿ.ಎಲ್.ದಿವಾಕರ್, ಮುಖ್ಯ ಶಿಕ್ಷಕ ಪಿ.ವಾಸುದೇವ್, ನಿವೃತ್ತ ಶಿಕ್ಷಕ ಸದಾಶಿವ ಪೂಜಾರಿ, ಬಣಕಲ್ ಗ್ರಾ.ಪಂ.ಅಧ್ಯಕ್ಷೆ ಬಿ.ಬಿ.ಲೀಲಾವತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಂಜಪ್ಪ, ಬಿ.ಎಸ್.ವಿಕ್ರಂ, ಟಿ.ಎಂ.ಗಜೇಂದ್ರ, ಶರತ್, ಸುಬ್ರಾಯಗೌಡ, ಪ್ರತೀಕ್, ಜಿ.ಎಚ್.ಶ್ರೀನಿವಾಸ್, ಸತೀಶ್, ರಮೇಶ್, ದಿನೇಶ್ ಶೆಟ್ಟಿ, ಶಿಕ್ಷಕಿ ವಲ್ಸಮ್ಮ, ಜಖಾವುಲ್ಲಾ, ಬಿ.ಶಿವರಾಮ ಶೆಟ್ಟಿ ಮತ್ತಿತರರು ಇದ್ದರು.