ಬೆಂಗಳೂರು : ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯುವಂತೆ ಯಾವ ರೈತರು ಮನವಿ ಮಾಡಿಲ್ಲ. ಹೀಗಾಗಿ ರಾಜ್ಯದಲ್ಲಿ ಜಾರಿ ಆಗಿರೋ ಎಪಿಎಂಸಿ ಕಾಯ್ದೆ ರದ್ದು ಮಾಡೋದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಎಪಿಎಂಸಿಗೆ ಎರಡು ತಿದ್ದುಪಡಿ ತರಲಾಗಿತ್ತು. ರೈತ ಬೆಳೆದ ಬೆಳೆಯನ್ನು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು ಎನ್ನುವುದು ನಿಯಮ ಇತ್ತು. ಎಲ್ಲಾದರೂ ಹೊರಗೆ ಮಾರಾಟ ಮಾಡಿದರೆ ದಂಡ ಹಾಕುವುದು ಎರಡನೇ ನಿಯಮವಿತ್ತು, ಅದಕ್ಕೆ ನಾವು ತಿದ್ದುಪಡಿ ತಂದೆವು.
ಕೇಂದ್ರದ ಕಾಯ್ದೆ ಬೇರೆ ನಮ್ಮ ಕಾಯ್ದೆ ಬೇರೆ. ರೈತರು ತಮ್ಮ ಬೆಳೆ ಎಪಿಎಂಸಿಯಲ್ಲಿ ಬೇಕಾದರೂ ಮಾರಾಟ ಮಾಡಬಹುದು ಅಥವಾ ಎಲ್ಲಿ ಬೇಕಾದ್ರು ಖಾಸಗಿಯಾಗಿ ಬೇಕಾದ್ರು ಮಾರಾಟ ಮಾಡಬಹುದು. ಅದಕ್ಕಾಗಿಯೇ ನಾವು ಕಾಯ್ದೆ ತಂದಿದ್ದೇವೆ. ರಾಜ್ಯದ ಯಾವ ರೈತರು ಕಾಯ್ದೆ ವಾಪಸ್ ಪಡೆಯುವಂತೆ ಮನವಿ ಮಾಡಿಲ್ಲ. ಹೀಗಾಗಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಎಪಿಎಂಸಿ ಕಾಯ್ದೆ ವಾಪಸ್ ಪಡೆಯುವುದಿಲ್ಲ ಅಂತ ಸ್ಪಷ್ಟಪಡಿಸಿದರು.
ಅಕ್ಟೋಬರ್ 2 ರಿಂದ ಯಶಸ್ವಿನಿ ಯೋಜನೆ ಜಾರಿ : ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಮಧು ಮಾದೇಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಟಿ ಸೋಮಶೇಖರ್, ನಮ್ಮ ಸರ್ಕಾರ ಯಶಸ್ವಿನಿ ಯೋಜನೆ ಮರು ಜಾರಿ ಮಾಡುತ್ತಿದೆ. ಸಿಎಂ ಬೊಮ್ಮಾಯಿ ಅವರು ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದಂತೆ ಯಶಸ್ವಿನಿ ಯೋಜನೆ ಜಾರಿ ಮಾಡಲಾಗುತ್ತಿದೆ. ಈಗಾಗಲೇ ಯೋಜನೆಗಾಗಿ 300 ಕೋಟಿ ಹಣ ಒದಗಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಅಕ್ಟೋಬರ್ 2 ರಿಂದ ಯೋಜನೆ ಪ್ರಾರಂಭಕ್ಕೆ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಈ ಯೋಜನೆ ರಾಜ್ಯದ ಎಲ್ಲಾ ರೈತರಿಗೆ ಅನ್ವಯ ಆಗುವುದಿಲ್ಲ. ಸಹಕಾರಿ ಸಂಸ್ಥೆಗಳ ಸದಸ್ಯರಿಗೆ ಮಾತ್ರ ಈ ಯೋಜನೆ ಅನ್ವಯ ಆಗಲಿದೆ ಎಂದು ಸ್ಪಷ್ಟಪಡಿಸಿದರು.










