ರಾಜ್ಯ ಬಜೆಟ್ ಮತ ಸೆಳೆಯುವ ತಂತ್ರ : ಕೆ.ಬಿ.ಸುಧಾ

77
firstsuddi

ಚಿಕ್ಕಮಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ಮುಂಗಡ ಪತ್ರ ಸುಳ್ಳು ಭರವಸೆಯ, ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಆಗಿದೆ ಎಂದು ಬಹುಜನ ಸಮಾಜ ಪಕ್ಷ ಟೀಕಿಸಿದೆ.

ಮುಖ್ಯಮಂತ್ರಿಯವರು ಚುನಾವಣೆ ಹೊಸ್ತಿಲಲ್ಲಿ ಮಂಡಿಸಿರುವ ಬಜೆಟ್ ಕೇವಲ ಮತ ಸೆಳೆಯುವ ತಂತ್ರವಾಗಿದೆ ಎಂದು ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ರಾಜ್ಯದ ಜನರ ವಾಸ್ತವಿಕ ಸಮಸ್ಯೆಯ ಬಗ್ಗೆ ಕಿಂಚಿತ್ತೂ ಅರಿವಿಲ್ಲ ಎಂಬುದು ಈ ಬಜೆಟ್‍ನಲ್ಲಿ ಸಾಭಿತಾಗಿದೆ. ಜನತೆ ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದು, ಮುಖ್ಯಮಂತ್ರಿಯವರು ಬಜೆಟ್ ಮಂಡಿಸುವಾಗ ಅದನ್ನು ಗಣನೆಗೆ ತಗೆದುಕೊಳ್ಳಬೇಕಿತ್ತು ಎಂದಿದ್ದಾರೆ.

ಅತಿವೃಷ್ಟಿ, ಅನಾವೃಷ್ಟಿ, ಬೆಳೆಗೆ ರೋಗಬಾಧೆ, ಬೆಲೆ ಕುಸಿತ ಮತ್ತು ಬೆಳೆ ಕುಂಠಿತದಿಂದ ಈಗಾಗಲೇ ಸಾಲ ಮಾಡಿರುವ ರೈತರು ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿಕರ ಸಾಲ ಮನ್ನಾ ಮಾಡುವುದನ್ನು ಬಿಟ್ಟು 5ಲಕ್ಷದ ವರೆಗೆ ಬಡ್ಡಿರಹಿತ ಸಾಲ ನೀಡುವುದಾಗಿ ಘೋಷಿಸಿರುವುದು ಹಾಸ್ಯಾಸ್ಪದ ಎಂದಿರುವ ಅವರು ರೈತರು ಹಳೆಯ ಸಾಲ ತೀರಿಸದಿರುವುದರಿಂದ ಹೊಸ ಸಾಲ ಪಡೆಯುವ ಅವಕಾಶದಿಂದ ವಂಚಿತರಾಗುತ್ತಾರೆ ಎಂದು ಹೇಳಿದ್ದಾರೆ.

ಬಜೆಟ್‍ನಲ್ಲಿ ರೈತರ ಬೆಳೆಗಳ ಖರೀದಿಗೆ ಶಾಶ್ವತ ಖರೀದಿ ಕೇಂದ್ರ ಸ್ಥಾಪನೆ, ಬೆಳೆಗಳ ರಕ್ಷಣೆಗೆ ಸೂಕ್ತ ಶೀಥಲಿಕರಣ ವ್ಯವಸ್ಥೆ ಹೊಂದಿರುವ ಗೋದಾಮುಗಳ ನಿರ್ಮಾಣದ ಬಗ್ಗೆ ಹೇಳಿಲ್ಲ. ಶಿಕ್ಷಣಕ್ಕೆ 37 ಸಾವಿರ ಕೋಟಿ ರೂ. ಅನುದಾನ ಒದಗಿಸುವುದಾಗಿ ಹೇಳಲಾಗಿದೆ. ಆದರೆ, ಖಾಲಿ ಇರುವ ಒಂದೂವರೆ ಲಕ್ಷ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾಪ ಇಲ್ಲ ಎಂದು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ರಾಜ್ಯ ವಸತಿ ಯೋಜನೆಗೆ ಹಣ ಬಿಡುಗಡೆ ಮಾಡದ ಬಿಜೆಪಿ ಸರ್ಕಾರ ಈಗ ಬಜೆಟ್‍ನಲ್ಲಿ ಐದು ಲಕ್ಷ ಮನೆಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿರುವುದು ವಿಪರ್ಯಾಸ. ರಾಜ್ಯದಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳನ್ನು ಮೂರು ವರ್ಷಗಳಿಂದ ಭರ್ತಿ ಮಾಡದ ಸರ್ಕಾರ ಈಗ ಚುನಾವಣೆ ಸಂದರ್ಭದಲ್ಲಿ ಭರ್ತಿ ಮಾಡುವುದಾಗಿ ಹೇಳಿರುವುದು ಮತ ಸೆಳೆಯುವ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.