ಬೆಂಗಳೂರು : ಈ ಬಾರಿಯ ಬಜೆಟ್ ನಲ್ಲಿ ನೀರಾವರಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಲಾಗಿದ್ದು, ಮೇಕೆದಾಟು ಯೋಜನೆ ಜಾರಿಗೆ 1,000 ಕೋಟಿ ರೂ. ಅನುದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ 3,000 ಕೋಟಿ ರೂ.ಗಳ ಅನುದಾನ ನೀಡಲಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ 3000 ಕೋಟಿ ರೂ. ಮತ್ತು ನವಲೆ ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1000 ಕೋಟಿ ರೂ. ಅನುದಾನ ನೀಡಲಾಗಿದೆ. ಕೇಂದ್ರ ಸರ್ಕಾರವು PMKSY-AIBP ಅಡಿಯಲ್ಲಿ ಸನ್ನತಿ ಏತ ನೀರಾವರಿ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1 ಮತ್ತು 2ರಲ್ಲಿನ ಬೂದಿಹಾಳ, ಪೀರಾಪುರ, ನಂದವಾಡಗಿ, ನಾರಾಯಣಪುರ ಬಲದಂಡೆ (9ಎ) ಕಾಲುವೆ ವಿಸ್ತರಣೆ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕೆರೆಗಳ ಸಮಗ್ರ ಅಭಿವೃದ್ಧಿಗೆ ಒಟ್ಟು 500 ಕೋಟಿ ರೂ. ಘೋಷಿಸಲಾಗಿದೆ. ಇದರಲ್ಲಿ ಪ್ರವಾಹದಿಂದ ಹಾನಿಯಾದ ಕೆರೆಗಳ ದುರಸ್ತಿಗೆ 200 ಕೋಟಿ ರೂ. ಹಣ ನೀಡಲಾಗಿದೆ.










