ಚಿಕ್ಕಮಗಳೂರು : ವಿದ್ಯಾವಂತರನ್ನು ಮಾತ್ರ ಸಮಾಜ ಗೌರವಿಸಿ ಸೂಕ್ತ ಸ್ಥಾನಮಾನ ನೀಡುತ್ತದೆ ಎಂದು ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಸಿ.ಶಶಿಪ್ರಸಾದ್ ಹೇಳಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಲಿಯೋ ಕ್ಲಬ್ ಹಿರೇಮಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ನಿನ್ನೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮಲ್ಲಿರುವ ಆಸ್ತಿ, ಅಂತಸ್ತು ಅಥವಾ ಹಣಕ್ಕೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ, ವಿದ್ಯಾವಂತರಾಗಿದ್ದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ, ಬಡತನವನ್ನು ಹೋಗಲಾಡಿಸಲು ಶಿಕ್ಷಣ ಪ್ರಮುಖವಾದ ಅಸ್ತ್ರ. ವಿದ್ಯಾರ್ಥಿಗಳು ಇದನ್ನು ಅರಿತು, ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲಿಯೋ ಕ್ಲಬ್ ಅಧ್ಯಕ್ಷೆ ಅಂಜೆಲ ಮೋನಿಶ ರೊಜಾರಿಯೋ ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣವಂತರಾಗಬೇಕು ಎಂದು ಸಲಹೆ ನೀಡಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಲಿಯೋ ಕ್ಲಬ್‍ನಿಂದ ಛದ್ಮವೇಷ, ಚಿತ್ರಕಲೆ, ಅಭಿನಯ, ಭಾಷಣ ಮತ್ತು ಗೀತಗಾಯನ ಸ್ಪರ್ಧೆಗಳನ್ನು ನಡೆಸಲಾಯಿತು, ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದೇ ವೇಳೆ ಲಿಯೋ ಕ್ಲಬ್ ಶಾಲೆಯ ಆವರಣದಲ್ಲಿ ದುರಸ್ತಿ ಪಡಿಸಿದ ಶೌಚಾಲಯನ್ನು ವಿದ್ಯಾರ್ಥಿಗಳು ಉದ್ಘಾಟಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿ.ಆರ್.ಪಿ ವಿ.ಪಿ.ಪೂರ್ಣೇಶ್, ಇಸಿಓ ಜಾನಕಮ್ಮ, ಮುಖ್ಯ ಶಿಕ್ಷಕ ಎ.ಇ.ಅಶೋಕ್, ಲಿಯೋ ಕ್ಲಬ್ ಖಜಾಂಚಿ ಸಿ.ಪ್ರಭು, ಕಾರ್ಯದರ್ಶಿ ಬಿ.ಅಮರನಾಥ್, ಚಿನ್ಮಯಿ ಉಪಸ್ಥಿತರಿದ್ದರು.










