ಬೆಂಗಳೂರು : ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ಮತದಾನ ಆರಂಭಗೊಂಡಿದ್ದು, 607 ಮತಗಟ್ಟೆಗಳಲ್ಲಿ 2,84,922 ಶಿಕ್ಷಕರು ಮತ್ತು ಪದವೀಧರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ವಾಯುವ್ಯ ಪದವೀಧರ, ದಕ್ಷಿಣ ಪದವೀಧರ, ವಾಯುವ್ಯ ಶಿಕ್ಷಕರು ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಬುಧವಾರ (ಜೂನ್ 15) ರಂದು ಫಲಿತಾಂಶ ಹೊರಬರಲಿದೆ. ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಈ ಹಿಂದೆ ನಾಲ್ಕು ಗಂಟೆವರೆಗೆ ಮತದಾನ ನಡೆಯುತ್ತಿತ್ತು. ಅಭ್ಯರ್ಥಿಗಳ ಮನವಿ ಮೇರೆ ಮತದಾನದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗಿದೆ.
ನಾಲ್ಕು ಮಹಿಳೆಯರು ಸೇರಿದಂತೆ ಒಟ್ಟು 49 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ವಾಯವ್ಯ ಪದವೀಧರರನ್ನು ಹೊರತುಪಡಿಸಿ ಉಳಿದೆಲ್ಲ ಸ್ಥಾನಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಜುಲೈ 4ರಂದು ಬಿಜೆಪಿಯ ಹಣಮಂತ ನಿರಾಣಿ, ಜೆಡಿಎಸ್ ನ ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿಯ ಅರುಣ್ ಶಹಾಪುರ ಮತ್ತು ಮತ್ತು ಜೆಡಿಎಸ್ ನ ಬಸವರಾಜ ಹೊರಟ್ಟಿ ಅವರ ಅವಧಿ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆ ಚುನಾವಣೆ ನಡೆಯುತ್ತಿದೆ. ಇನ್ನು ಬಿಜೆಪಿ ಅಭ್ಯರ್ಥಿಯಾಗಿ ವಿಧಾನಪರಿಷತ್ ಸಭಾಪತಿ ಹೊರಟ್ಟಿ ಕಣಕ್ಕಿಳಿದಿದ್ದಾರೆ.
ವಾಯವ್ಯ ಶಿಕ್ಷಕ ಕ್ಷೇತ್ರದ ಚುನಾವಣಾ ಕಣದಲ್ಲಿ ಅರುಣ ಶಹಪುರ (ಬಿಜೆಪಿ), ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್) ಮತ್ತು ಚಂದ್ರಶೇಖರ್ ಲೋಣ (ಜೆಡಿಎಸ್) ಇದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ನಿಂಗಪ್ಪ ಬನ್ನೂರು,. ಶ್ರೀಕಾಂತ್ ಪಾಟೀಲ್, ಬಸಪ್ಪ ಮನಿಗಾರ, ಜಯಪಾಲ್ ದೇಸಾಯಿ, ಅಪ್ಪಾಸಾಹೇಬ್ ಕರುಣೆ, ಚಂದ್ರಶೇಖರ್ ಗಡಸಿ, ಸಂಗಮೇಶ್ ಚಿಕ್ಕನರಗುಂದ ಮತ್ತು ಶ್ರೇಣೀಕ್ ಜಾಂಗಟೆ ಕಣದಲ್ಲಿದ್ದಾರೆ.
ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಎಂಎಲ್ ಸಿ ಎಂವಿ ರವಿಶಂಕರ್, ಕಾಂಗ್ರೆಸ್ ನಿಂದ ಮಧು ಜಿ ಮಾದೇಗೌಡ ಮತ್ತು ಜೆಡಿಎಸ್ ನಿಂದ ಎಚ್ ಕೆ ರಾಮು ಕಣದಲ್ಲಿದ್ದಾರೆ.
ಚುನಾವಣೆ ನಡೆಯುವ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಂದು ವಿಶೇಷ ಸಾಂದರ್ಭಿಕ ರಜೆ ಘೋಷಣೆ ಮಾಡಲಾಗಿದೆ.










