ವಿವಾದಿತ ನಕ್ಷೆ ಪೋಸ್ಟ್ : ಎಂಇಎಸ್ ಮುಖಂಡನ ವಿರುದ್ಧ ಎಫ್ಐಆರ್ ದಾಖಲು…

116
firstsuddi

ಬೆಳಗಾವಿ : ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ನಕ್ಷೆಯನ್ನು ಶೇರ್ ಮಾಡಿ ಉದ್ಧಟತನ ಮೆರೆದಿದ್ದ ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕರ್ನಾಟಕ ಗಡಿಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ವಿವಾದಿತ ನಕ್ಷೆ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತ ವಿನಾಯಕ ಭೋವಿ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಟಿ ಆ್ಯಕ್ಟ್ 2000(U/s-66), ಐಪಿಸಿ ಸೆಕ್ಷನ್ 1860(U/s-153B)ರಡಿ ಕೇಸ್ ದಾಖಲಾಗಿದೆ.

ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ ಗ್ರಾಫಿಕ್ ವೀಡಿಯೋ, ಫೋಟೋ ಹಂಚಿಕೊಂಡಿದ್ದ. ಅಲ್ಲದೇ ವೀಡಿಯೋದಲ್ಲಿ ಮಹಾರಾಷ್ಟ್ರವಾದಿಗಳೇ ನಮಗೆ ಮನಃಪೂರ್ವಕವಾಗಿ ಮಹಾರಾಷ್ಟ್ರ ದಿನಕ್ಕೆ ಶುಭಕೋರಲು ಆಗುತ್ತಿಲ್ಲ. ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ರಕ್ತ ಹೋರಾಟದ ಮುನ್ನುಡಿ ಬರೆದಿದೆ. ಬೆಳಗಾವಿ ಸೇರಿ ಗಡಿ ಭಾಗದ ಮರಾಠಿಗರು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾನೆ. ಪೋಸ್ಟ್ ಡಿಲೀಟ್ ಮಾಡುವಂತೆ ಠಾಣೆಗೆ ಕರೆಸಿ ಪೊಲೀಸರು ಎಚ್ಚರಿಕೆ ಕೊಟ್ಟಿದ್ದರು. ಆದರೂ ಪೋಸ್ಟ್ ಡಿಲೀಟ್ ಮಾಡದೇ ಆರೋಪಿ ಶುಭಂ ಉದ್ಧಟತನ ಮೆರೆದಿದ್ದ.