ಮಂಗಳೂರು : ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ತೀರ್ಥಹಳ್ಳಿಯ ಶಾರೀಕ್ ಜಾಗತಿಕ ನೆಟ್ ವರ್ಕ್ ಹೊಂದಿರುವ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿ ಕೃತ್ಯ ಎಸಗಿದ್ದಾನೆ ಎಂದು ಎಡಿಜಿಪಿ ಅಲೋಕ್‌ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಿಂದ ಪೊಲೀಸರು ಕರೆಸಿಕೊಂಡಿದ್ದ ಮಲತಾಯಿ ಶಬಾನಾ, ಸೋದರಿ ಆತಿಯಾ, ಚಿಕ್ಕಮ್ಮ ಯಾಸ್ಮಿನ್ ಅವರು ಶಾರೀಕ್ ನನ್ನು ಗುರುತು ಹಿಡಿದಿದ್ದಾರೆ. ಅಲ್ಲದೆ, ಪೊಲೀಸರ ದಾಳಿ ವೇಳೆ ಶಾರೀಕ್ ಉಳಿದುಕೊಂಡಿದ್ದ ಮನೆಯಲ್ಲಿಯೂ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಕೊಯಮತ್ತೂರು, ತಮಿಳುನಾಡು, ಕೇರಳ ಎಲ್ಲೆಡೆ ಸುತ್ತಾಡಿ ಮೈಸೂರಿಗೆ ಬಂದಿದ್ದ ಎಂದು ಹೇಳಿದ್ದಾರೆ.
2020ರಲ್ಲಿ ಮಂಗಳೂರಿನಲ್ಲಿ ಗೋಡೆ ಬರಹ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಅವನ ಮೇಲೆ ಯುಎಪಿಎ ಆಕ್ಟ್ ನಡಿ ಕೇಸ್ ಆಗಿದೆ. ಎ1 ಆರೋಪಿ ಶಾರೀಕ್ ಆಗಿದ್ದ, ಆಗಲೇ ಮನೆಯವರು ಬುದ್ದಿ ಹೇಳಿದ್ದರಂತೆ. ಶಿವಮೊಗ್ಗದಲ್ಲಿ ಜಬೀವುಲ್ಲ ಕೇಸ್ ವಿಚಾರಣೆ ವೇಳೆ ಇವರ ಮಾಹಿತಿ ಗೊತ್ತಾಗಿತ್ತು. ಮುನೀರ್ ಬಂಧನ ಬಳಿಕ ಶಾಕೀರ್ ಟ್ರಾಯಲ್ ಬ್ಲಾಸ್ಟ್ ಮಾಡಿದ್ದು ಗೊತ್ತಾಗಿದೆ. ಆದರೆ, ಇದ್ಯಾವ ವಿಚಾರವೂ ಮೈಸೂರು ಮನೆ ಮಾಲೀಕ ಮೋಹನ್ ಗೆ ಗೊತ್ತಿಲ್ಲ. ಮೊನ್ನೆ ಮೈಸೂರಿನಿಂದ ಮಡಿಕೇರಿ ಮಾರ್ಗವಾಗಿ ಬಸ್ ನಲ್ಲಿ ಮಂಗಳೂರು ಬಂದಿದ್ದಾನೆ.
ಅಲ್ಲಿ ನಾಗುರಿ ಇಳಿದು ಅವನ ಟಾರ್ಗೆಟ್ ಜಾಗಕ್ಕೆ ಹೋಗುತ್ತಿದ್ದ. ಆದರೆ, ಅವನು ಎಲ್ಲಿಗೆ ಹೋಗುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿಲ್ಲ. ಆರೋಪಿ ಅವನು ಗುಣಮುಖವಾದ ಬಳಿಕ ಈ ವಿಚಾರ ತಿಳಿದುಬರಲಿದೆ. ವಾರದ ಹಿಂದೆ ಒಮ್ಮೆ ಮಂಗಳೂರಿಗೆ ಬಂದು ಸುತ್ತಾಡಿ ಹೋಗಿದ್ದಾನೆ. ಮೈಸೂರಿನಿಂದ ಇಬ್ಬರು ಹಾಗೂ ಮಂಗಳೂರಿನ ಒಬ್ಬರನ್ನ ಪ್ರಕರಣ ಸಂಬಂಧ ವಶಕ್ಕೆ ಪಡೆಯಲಾಗಿದೆ. ಇವನು ವಿದೇಶದ ಒಂದು ಉಗ್ರ ಸಂಘಟನೆಯ ಪ್ರಭಾವಕ್ಕೆ ಒಳಗಾಗಿದ್ದ ಎಂಬುವುದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಶಾರೀಕ್ ಬಾಂಬ್ ಅನ್ನ ಸರಿಯಾಗಿ ಜೋಡಿಸಿರಲಿಲ್ಲ, ಅದರಲ್ಲಿ ಅವನು ಎಕ್ಸ್ ಪರ್ಟ್ ಆಗಿರಲೂ ಇಲ್ಲ. ಅರ್ಧಂಬರ್ಧ ಬಾಂಬ್ ತಯಾರಿಸಿದ್ದ, ಸರಿಯಾಗಿ ಮಾಡಿಲ್ಲ. ಮೈಸೂರಿನಲ್ಲಿ ಮೊಬೈಲ್ ತಯಾರಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದ ಶಾರಿಕ್, ಪೊಟ್ಯಾಸಿಯಮ್ ನೈಟ್ರೈಟ್, ಸೋಡಿಯಂ, ಅಮೋನಿಯಂ ನಂತಹ ಸ್ಪೋಟಕ ಇತ್ತು. ಇದಕ್ಕೆ ಕೆಲವೊಂದು ಐಟಮ್ ಆನ್ ಲೈನ್ ನಲ್ಲಿ, ಕೆಲ ಐಟಂ ನೇರವಾಗಿ ಶಾಪ್ ನಲ್ಲಿ ತೆಗೊಂಡಿದ್ದಾನೆ. ಸಿಮ್ ಕಾರ್ಡ್ ಖರೀದಿಗಾಗಿ ಕೊಯಮತ್ತೂರು ಮೂಲದ ಒಬ್ಬರ ಆಧಾರ್ ಕಾರ್ಡ್ ಬಳಕೆ ಮಾಡಿದ್ದ. ಸದ್ಯ ಕಸ್ಟಡಿಯಲ್ಲಿ ನಾಲ್ಕು ಜನ ಇದ್ದಾರೆ. ಮೂವರು ವಶದಲ್ಲಿದ್ದು, ಒಬ್ಬನನ್ನ ಊಟಿಯಿಂದ ಕರೆ ತರ್ತಾ ಇದೀವಿ. ಇದು ಕರ್ನಾಟಕ ಪೊಲೀಸರ ಸ್ವತಂತ್ರ ತನಿಖೆ, ಆದರೆ ಕೇಂದ್ರ ತನಿಖಾ ದಳದ ಜೊತೆ ಸಂಪರ್ಕದಲ್ಲಿ ಇದ್ದೇವೆ ಎಂದು ವಿವರಿಸಿದ್ದಾರೆ.
ಬಾಂಬ್ ಬ್ಲಾಸ್ಟ್ ಆಗಿದ್ದರೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗ್ತಾ ಇತ್ತು. ಆದರೆ, ಆ ವಿಚಾರದಲ್ಲಿ ದೇವರಿಗೆ ಧನ್ಯವಾದ ಸಲ್ಲಿಸಲೇಬೇಕು. ಸದ್ಯ ಅವನಿಗೆ ಚಿಕಿತ್ಸೆ ಮುಂದುವರೆದಿದೆ, ಅವನು ಗುಣಮುಖನಾದ ಬಳಿಕ ವಿಚಾರಣೆ ನಡೆಸುತ್ತೇವೆ. ಚಾಲಕ ಪುರುಷೋತ್ತಮ್ ಪೂಜಾರಿಗೆ ಸರ್ಕಾರದ ವತಿಯಿಂದ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇವೆ. ಅವರ ಸಂಬಂಧಿಕರ ಸಮಸ್ಯೆಗೂ ನಾವು ಸ್ಪಂದನೆ ಕೊಡುತ್ತೇವೆ. ಮಂಗಳೂರು ಮತ್ತು ಮೈಸೂರು ಪೊಲೀಸ್ ಆಯುಕ್ತರ ತನಿಖೆ ಮುಂದುವರೆಯುತ್ತಿದೆ ಎಂದು ಹೇಳಿದ್ದಾರೆ.










