ಶಿವಮೊಗ್ಗ : ಚಾಕುವಿನಿಂದ ಇರಿದು ಯುವಕನ ಹತ್ಯೆ…

110
firstsuddi

ಶಿವಮೊಗ್ಗ: ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಹತ್ಯೆಯಾದ ಯುವಕನನ್ನು ಕೋಡಿಹಳ್ಳಿ ಬಡಾವಣೆ ನಿವಾಸಿ ನವೀನ್ (25) ಎಂದು ಗುರುತಿಸಲಾಗಿದೆ.

ಹತ್ಯೆಯಾದ ನವೀನ್ ಹಾಗೂ ಆತನ ಸ್ನೇಹಿತ ಅರುಣ್ ಕುಮಾರ್ ಇಬ್ಬರೂ ಸ್ನೇಹಿತರಾಗಿದ್ದು, ಮೊಬೈಲ್ ಕಳ್ಳತನ ಇವರ ಕಸುಬಾಗಿತ್ತು. ಕಳವು ಮಾಡಿದ ಮೊಬೈಲ್ ಗಳನ್ನು ಸದಾತ್ ಎಂಬವನ ಬಳಿ ಮಾರಾಟ ಮಾಡುತ್ತಿದ್ದರು. ಸದಾತ್ ಮೊಬೈಲ್ ಖರೀದಿಸಿ ಬಾಕಿ ಹಣವನ್ನು ಉಳಿಸಿಕೊಂಡಿದ್ದ. ಬಾಕಿ ಹಣವನ್ನು ಕೇಳಲು ನವೀನ್ ಹಾಗೂ ಅರುಣ್ ಸತ್ಯಸಾಯಿನಗರಕ್ಕೆ ತೆರಳಿದ್ದರು. ಬಾಕಿ ಹಣ ವಸೂಲಿಗೆ ತೆರಳಿದ್ದ ವೇಳೆ ನವೀನ್, ಅರುಣ್ ಕುಮಾರ್ ಹಾಗೂ ಸದಾತ್ ಗುಂಪಿನ ನಡುವೆ ಗಲಾಟೆ ನಡೆದಿದೆ.

ರಂಜಾನ್ ಹಬ್ಬ ಇರುವ ಕಾರಣ ಹಣ ಇಲ್ಲ. ನಂತರ ಕೊಡುವುದಾಗಿ ಸದಾತ್ ತಿಳಿಸಿದ್ದಾನೆ. ಹಣ ಕೊಡುವುದಿಲ್ಲ ಎಂಬ ಕಾರಣಕ್ಕೆ ಎರಡು ಗುಂಪಿನ ನಡುವೆ ಗಲಾಟೆ ನಡೆದು ಹೊಡೆದಾಡಿಕೊಂಡಿದ್ದಾರೆ. ನಂತರ ಸದಾತ್ ತನ್ನ ಬಳಿಯಿದ್ದ ಚಾಕುವಿನಿಂದ ನವೀನ್ ಗೆ ಇರಿದಿದ್ದಾನೆ. ಚಾಕು ಇರಿತಕ್ಕೊಳಗಾದ ನವೀನ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಘಟನೆ ನಂತರ ಯುವಕರು ಸ್ಥಳದಿಂದ ಪರಾರಿಯಾಗಿದ್ದರು. ನಂತರ ಸ್ಥಳೀಯರು ನವೀನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ನವೀನ್ ಕೊನೆಯುಸಿರೆಳೆದಿದ್ದಾನೆ.

ಹಿಂದೂ ಯುವಕನನ್ನು ಮುಸ್ಲಿಂ ಯುವಕರು ಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಭಜರಂಗದಳ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆ ಮುಖಂಡರು ಆಸ್ಪತ್ರೆ ಬಳಿ ಜಮಾಯಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಹೊಸಮನೆ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.