ಶೋಷಿತ ಸಮುದಾಯದ ಜನ ಅಂಬೇಡ್ಕರ್ ಅವರನ್ನು ದೇವರೆಂದು ಪರಿಗಣಿಸಿ ಪೂಜಿಸಿ : ಕೆ.ಟಿ.ರಾಧಾಕೃಷ್ಣ.

80
firstsuddi

ಚಿಕ್ಕಮಗಳೂರು : ಶೋಷಿತ ಸಮುದಾಯದ ಜನ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ ಅವರನ್ನು ದೇವರೆಂದು ಪರಿಗಣಿಸಿ ಪೂಜಿಸಬೇಕು ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಲಹೆ ನೀಡಿದರು.

ತಾಲ್ಲೂಕಿನ ಉಜ್ಜಿನಿ ಹೊಸಪೇಟೆಯಲ್ಲಿ ಬಹುಜನ ಸಮಾಜ ಪಕ್ಷದ ಗ್ರಾಮ ಘಟಕ ನಿನ್ನೆ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಕೆಳವರ್ಗದವರು ಮಹಿಳೆಯರು ಮತ್ತು ದಲಿತರ ಪರಿಸ್ಥಿತಿ ಅತ್ಯಂತ ಹೀನಾಯವಾಗಿತ್ತು, ಮೇಲ್ವರ್ಗದ ಜನ ಅವರನ್ನು ತುಚ್ಚವಾಗಿ ಕಂಡು ಪಶುಗಳಂತೆ ನಡೆಸಿಕೊಳ್ಳುತ್ತಿದ್ದರು, ಕೆಳವರ್ಗದವರು ಮತ್ತು ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಶೋಷಣೆ ಮಾಡುತ್ತಿದ್ದರು, ಮಠ ಮಂದಿರಗಳಿಂದ ಅವರನ್ನು ದೂರವಿಟ್ಟಿದ್ದರು ಎಂದು ವಿಷಾದಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸತತ ಹೋರಾಟ ಮತ್ತು ಪರಿಶ್ರಮದಿಂದಾಗಿ ಶೋಷಿತ ಸಮುದಾಯದ ಜನ ಇಂದು ಗೌರವದಿಂದ ಬಾಳುವಂತಾಗಿದೆ, ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದಾಗಿ ಮತದಾನ, ಶಿಕ್ಷಣ ಸೇರಿದಂತೆ ಅನೇಕ ಹಕ್ಕುಗಳನ್ನು, ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಶೋಷಿತ ಸಮುದಾಯದ ಜನ ತಮ್ಮ ನಾಯಕ ಅಂಬೇಡ್ಕರ್ ಅವರ ಭಾವಚಿತ್ರವನ್ನು ತಮ್ಮ ಮನೆಗಳಲ್ಲಿ ತಪ್ಪದೇ ಹಾಕಬೇಕು, ಅವರನ್ನು ದೇವರೆಂದು ಪರಿಗಣಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ ದಲಿತರು, ಕೆಳವರ್ಗದವರು ಮತ್ತು ಶೋಷಿತರು ತಮ್ಮ ಉದ್ದಾರಕ್ಕಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗಬೇಕು ಎಂದು ತಿಳಿಸಿದರು.

ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಜಿಲ್ಲಾ ಸಹೋದರತ್ವ ಸಮಿತಿಯ ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಗ್ರಾ.ಪಂ. ಅಧ್ಯಕ್ಷೆ ರಜತಿ, ಹರೀಶ್, ಚಂದ್ರಶೇಖರ್, ಅವಿನಾಶ್, ನವೀನ್, ದಿನೇಶ್, ಮಹೇಶ್, ಆರ್.ಗಿರೀಶ್, ಆನಂದ್, ಚೇತನ್, ರಂಜಿತ್, ವೆಂಕಟೇಶ್ ಉಪಸ್ಥಿತರಿದ್ದರು.