ಸಂಪತ್ ಜಯರಾಮ್ ಸಾವಿನ ಬಗ್ಗೆ ಸ್ಪಷ್ಟನೆ ನೀಡಿದ ರಾಜೇಶ್ ಧ್ರುವ.

79
firstsuddi

ಕಿರುತೆರೆ ನಟ ಸಂಪತ್ ಜಯರಾಮ್ ಏ.22ರಂದು ಇಹಲೋಕ ತ್ಯಜಿಸಿದ್ದರು. ಸಂಪತ್ ಸಾವಿನ ಬೆನ್ನಲ್ಲೇ ಸಾಕಷ್ಟು ಗಾಸಿಪ್‌ಗಳು ಹುಟ್ಟಿಕೊಂಡವು. ಈ ಕುರಿತು ನಟ ಹಾಗೂ ಸಂಪತ್ ಅವರ ಸ್ನೇಹಿತ ರಾಜೇಶ್ ಧ್ರುವ ಅವರು ಸ್ಪಷ್ಟನೆ ನೀಡಿದ್ದಾರೆ.

ಸಂಪತ್ ಜಯರಾಮ್ ನನ್ನ ಪ್ರಾಣ ಸ್ನೇಹಿತ. ನಮ್ಮನ್ನು ಬಿಟ್ಟು ಅಗಲಿದ್ದಾರೆ. ಬಾಲಾಜಿ ಫೋಟೋ ಸ್ಟುಡಿಯೊ ಸಿನಿಮಾ ಅವರ ನಟನೆಗೆ ತುಂಬ ಒಳ್ಳೆಯ ಹೆಸರು ತಂದು ಕೊಟ್ಟಿತ್ತು. ಸಿನಿಮಾ ನೋಡಿರುವ ಪ್ರತಿಯೊಬ್ಬರೂ ಒಂದೊಳ್ಳೆ ನಟ ಸಿಕ್ಕಿದ್ದಾನೆ ನಮ್ಮ ಇಂಡಸ್ಟ್ರಿಗೆ ಎಂದು ತುಂಬಾ ಖುಷಿ ಪಟ್ಟಿದ್ದಾರೆ. ʻಅಗ್ನಿಸಾಕ್ಷಿʼ ಧಾರಾವಾಹಿಯಿಂದ ತುಂಬಾ ಒಳ್ಳೆ ಹೆಸರು ಪಡೆದುಕೊಂಡಿದ್ದರು. ಚಿಕ್ಕಮಗಳೂರು ಮತ್ತು ಕೊಪ್ಪ ಅವರ ಊರು, ಅವರಿಂದ ನನಗೆ ಆ ಊರು ತಂಬಾ ಹತ್ತಿರವಾಗಿದೆ. ಸಂಪತ್ ಮತ್ತು ನಾನು ಒಟ್ಟಿಗೆ ಇಂಡಸ್ಟ್ರಿಗೆ ಬಂದವರು. 2013ರಿಂದ ಒಟ್ಟಿಗೆ ಅಗ್ನಿಸಾಕ್ಷಿ ಸೀರಿಯಲ್ ಮಾಡಿದ್ದೀವಿ. ಪ್ರತಿಭೆನೇ ಸಂಪತ್‌ಗೆ ತುಂಬಾ ದೊಡ್ಡ ಆಸ್ತಿ.

ನಿನ್ನೆ ರಾತ್ರಿ 2 ಗಂಟೆಗೆ ರವಿ ಅವರಿಂದ ನನಗೆ ಕರೆ ಬರುತ್ತೆ ನಾನು ಕೂಡ ನಿದ್ರೆಯಲ್ಲಿದ್ದೆ. ಫೋನ್ ಸೈಲೆಂಟ್‌ನಲ್ಲಿ ಇರಲಿಲ್ಲ ರಿಂಗ್ ಆಗಿದಕ್ಕೆ ಪಿಕ್ ಮಾಡಿ ಮಾತನಾಡಿದೆ. ಸಂಪತ್‌ಗೆ ತುಂಬಾ ಸೀರಿಯಸ್ ಅಂತ ಹೇಳಿದರು. ನೋಡಿದಾಗ ಸಂಪತ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯಾಕೆ ಸಂಪತ್ ಈ ರೀತಿ ಮಾಡಿಕೊಂಡರು ಅಂತ ವಿಚಾರಿಸಿದಾಗ ಅಲ್ಲಿ ಬಂದಂತ ಕಾಮನ್ ಉತ್ತರ ಒಂದೇ ಹುಡುಗಾಟ ಆಡಲು ಹೋಗಿ ಈ ರೀತಿ ಆಗಿದೆ ಎಂದು.

ಇತ್ತೀಚಿಗೆ ಮದುವೆ ಮಾಡಿಕೊಂಡಿದ್ದ ಒಂದು ವರ್ಷ ಕೂಡ ಆಗಿರಲಿಲ್ಲ. ಪತ್ನಿ ಚೈತನ್ಯ 5 ತಿಂಗಳ ಗರ್ಭಿಣಿ. 11 ಅಥವಾ 12 ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಮನೆಯಲ್ಲಿ ಒಪ್ಪಿಸಿ, ಇಂಟರ್ ಕಾಸ್ಟ್ ಮದುವೆ ಮಾಡಿಕೊಂಡಿದ್ದರು. ತುಂಬಾ ಚೆನ್ನಾಗಿ ಜೀವನ ಲೀಡ್ ಮಾಡುತ್ತಿದ್ದರು. ಅವರಿಬ್ಬರ ಜೀವನದಲ್ಲಿ ಒಂದು ಹುಳುಕು ಇರಲಿಲ್ಲ. ಅವರ ಮದುವೆ ಪ್ರೀ-ವೆಡ್ಡಿಂಗ್ ಶೂಟ್‌ನ ನಾನೇ ಮಾಡಿಕೊಟ್ಟಿದ್ದು. ಅವರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿರುವೆ. ಅವರ ಲವ್ ಸ್ಟೋರಿ ಪ್ರತಿಯೊಂದು ನನಗೆ ಗೊತ್ತು ಎಂದು ರಾಜೇಶ್ ಮಾತನಾಡಿದ್ದಾರೆ.

ಸಂಪತ್ ಹೇಗೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು ಅಷ್ಟು ಸಿಂಪಲ್ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ವೀಕ್ ಮೈಂಡ್ ಹುಡುಗ ಅಲ್ಲ ಏಕೆಂದರೆ ಸಂಪತ್ ಅನೇಕರಿಗೆ ತಿದ್ದಿ ಬುದ್ಧಿ ಹೇಳಿದ್ದಾರೆ. ಆರ್ಥಿಕ ಸಮಸ್ಯೆ ಇತ್ತು ಗಂಡ-ಹೆಂಡತಿ ನೆಮ್ಮದಿಯಾಗಿ ಇರಲಿಲ್ಲ, ಅವಕಾಶ ಸಿಗಲಿಲ್ಲ ಎಂದು ಡಿಪ್ರೆಶನ್‌ನಲ್ಲಿದ್ದ, ಅಂತಾ ವಿಡಿಯೋ ಹರಿದಾಡುತ್ತಿದೆ. ಚಾನ್ಸ್ ಇರಲಿಲ್ಲ ನಿಜ ಆದರೆ ನಮ್ಮ ತಂಡದಲ್ಲಿ ನಮಗೆ ನಾವೇ ಚಾನ್ಸ್ ಸೃಷ್ಠಿ ಮಾಡಿಕೊಳ್ಳುತ್ತಿದ್ವಿ. ಸ್ವಲ್ಪ ವರ್ಷದಲ್ಲಿ ಒಂದೊಳ್ಳೆ ನಟ ಅಂತ ಹೆಸರು ಮಾಡುವ ಸಾಮರ್ಥ್ಯ ಅವನಲ್ಲಿ ಇತ್ತು. ‘ಅಗ್ನಿಸಾಕ್ಷಿ’ ಧಾರಾವಾಹಿ ನೋಡಿ ಅನೇಕರು ಆತನ ನಟನೆ ಮೆಚ್ಚಿಕೊಂಡಿದ್ದರು. ಸಂಪತ್ ಎಂದಿಗೂ ಸೋಲು ಒಪ್ಪಿಕೊಳ್ಳುತ್ತಿರಲಿಲ್ಲ ತುಂಬಾ ಪ್ರಯತ್ನ ಮಾಡುತ್ತಿದ್ದರು. ಸಂಸಾರದಲ್ಲಿ ಸಣ್ಣ ಪುಟ್ಟ ಮಾತುಕತೆ ಅಂತಾ ಬಂದಾಗ ಹುಡುಗಾಟ ಮಾಡಿಕೊಳ್ಳಲು ಹೋಗಿ ಈ ರೀತಿ ಪರಿಣಾಮ ಬೀರಿದೆ. ದಯವಿಟ್ಟು ಕೆಟ್ಟ ಗಾಸಿಪ್ ಮಾಡಬೇಡಿ. ಗಂಡ-ಹೆಂಡತಿ ನಡುವೆ ಆದ ಚಿಕ್ಕ ಜಗಳಕ್ಕೆ ನಾನು ಸತ್ತು ಹೋಗುತ್ತೀನಿ ಹಾಗೆ ಹೀಗೆ ಎಂದು ಹೆದರಿಸಿದ್ದಾನೆ ಆಗ ಕುತ್ತಿಗೆ ಲಾಕ್ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹೀಗೆ ಮಾಡಿರೋದು ಅಲ್ಲ, ಹೆದರಿಸಲು ಹೋಗಿ ಅಚಾನಕ್ ಆಗಿ ಹೀಗೆ ಆಗಿದೆ ಎಂದು ನಟ ರಾಜೇಶ್ ಧ್ರುವ ಸ್ಪಷ್ಟನೆ ನೀಡಿದ್ದಾರೆ.

ಸಂಪತ್ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ, ನನ್ನ ಕಣ್ಣಿಗೂ ಒಂದೆರಡು ವಿಡಿಯೊಗಳು ಬಿತ್ತು. ನಿಮ್ಮ ನಿಮ್ಮ ದೃಷ್ಟಿಯಿಂದ ಹೇಳಿಕೆ ಕೊಟ್ಟರೆ ಅದು ಸತ್ಯ ಆಗುವುದಿಲ್ಲ. ಯಾಕೆ ಈ ರೀತಿ ಮನವಿ ಮಾಡುತ್ತಿರುವೆ ಅಂದರೆ ಸಂಪತ್ ಅವರಿಗೆ ಅವರದ್ದೇ ಆದ ಕುಟುಂಬ ಇದೆ. ನಮ್ಮಂತೆ ತುಂಬಾ ಜನ ಸ್ನೇಹಿತರಿದ್ದಾರೆ. ನೆಗೆಟಿವ್ ಕಾಮೆಂಟ್ ಮಾಡಿ ನಮ್ಮ ಎಮೋಷನ್‌ನ ತುಂಬಾ ಹರ್ಟ್ ಮಾಡುತ್ತಿದ್ದೀರಿ. ಸುಳ್ಳು ಸುದ್ದಿ ಬೇಡ. ನಿಜಾಂಶ ಏನಿದೆ ಅದನ್ನು ಜನರಿಗೆ ತಿಳಿಸುವ ಕೆಲಸ ನಿಮ್ಮಿಂದ ಆಗಲಿ ಅಷ್ಟೆ. ತುಂಬಾ ಭಾರವಾದ ಮನಸ್ಸಿನಿಂದ ಈ ವಿಡಿಯೊ ಮಾಡುತ್ತಿರುವೆ’ ಎಂದು ಹೇಳಿದ್ದಾರೆ.