ದೊಡ್ಡಬಳ್ಳಾಪುರ : ಸಂಬಳ ಜಾಸ್ತಿ ಆಗದೇ ಜೀವನ ನಡೆಸಲು ಆಗುತ್ತಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಕಾರ್ಮಿಕನೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶಿವರಾಜ್ (28) ಆತ್ಮಹತ್ಯೆಗೆ ಶರಣಾದ ಕಾರ್ಮಿಕ. ಶಿವರಾಜ್ ದಾವಣಗೆರೆ ಮೂಲದವನಾಗಿದ್ದು, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಇಂಡೋ ಮಿಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದಿಗಾನಹಳ್ಳಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಶಿವರಾಜ್ ತನ್ನ ಸಂಬಳ ಕೇವಲ 18,000 ರೂ.ಗಳಾಗಿದ್ದು ಅದರಲ್ಲಿ ಮನೆ ಸಂಭಾಳಿಸಲು ಸಾಧ್ಯವಾಗುತ್ತಿಲ್ಲ. ಸಂಬಳ ಹೆಚ್ಚಿಸಿ ಎಂಬ ಬೇಡಿಕೆಯನ್ನು ಕಾರ್ಖಾನೆಯವರು ಈಡೇರಿಸುತ್ತಿಲ್ಲ. ಜೊತೆಗೆ ಕಂಪನಿಯ ವೆಂಕಟರಾಮು, ಬಾಲು ಮತ್ತು ರಾಮು ಎಂಬುವರು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಅಲ್ಲದೆ ತನ್ನ ಕುಟುಂಬ ಬಗ್ಗೆ ಬರೆದಿರುವ ಶಿವರಾಜ್ ಕಂಪನಿಯಲ್ಲಿ ಸಿಗುವ ಇನ್ಸೂರೆನ್ಸ್ ಹಣವನ್ನು ತನ್ನ ಮನೆಯವರಿಗೆ ನೀಡಿ. ಅಡ ಇಟ್ಟಿರುವ ತನ್ನ ತಾಯಿ ಮತ್ತು ಅಕ್ಕನ ಒಡವೆಯನ್ನು ಯಾರಾದರೂ ಬಿಡಿಸಿಕೊಡಿ ಎಂದು ಕೇಳಿಕೊಂಡಿದ್ದಾನೆ. ಸಾಯುತ್ತಿರುವುದಕ್ಕೆ ಮನೆಯವರಿಗೆಲ್ಲ ಸ್ವಾರಿ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಘಟನೆ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










