ಭೋಪಾಲ್ : ಸಂವಿಧಾನ ಉಳಿಸಲು ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡಿ ಎಂದು ಮಧ್ಯಪ್ರದೇಶದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಆಗಿರುವ ರಾಜಾ ಪಟೇರಿಯಾ ಅವರು ಹೇಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಮಾಜಿ ಸಚಿವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸಭೆಯೊಂದರಲ್ಲಿ ಮಾತನಾಡುತ್ತಾ, `ಪ್ರಧಾನಿ ಮೋದಿ ಅವರು ದೇಶದಲ್ಲಿ ಜಾತಿ, ಧರ್ಮ, ಭಾಷೆ ಆಧಾರದಲ್ಲಿ ವಿಭಜನೆ ಮಾಡುತ್ತಿದ್ದಾರೆ. ಅವರ ಆಡಳಿತದಲ್ಲಿ ದಲಿತರು ಆತಂಕವನ್ನು ಎದುರಿಸುತ್ತಿದ್ದಾರೆ. ನೀವು ಸಂವಿಧಾನ ಉಳಿಸಲು ಮೋದಿಯನ್ನು ಕೊಲ್ಲಲು ಸಿದ್ಧರಾಗಬೇಕು. ಕೊಲ್ಲುವುದೆಂದರೆ ಹತ್ಯೆ ಮಾಡುವುದಲ್ಲ. ಅವರನ್ನು ಸೋಲಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕನ ಹೇಳಿಕೆಯಿಂದ ಬಿಜೆಪಿ ಪಾಳಯ ಕೆಂಡಾಮಂಡಲವಾಗಿದೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ಕೇಸ್ ದಾಖಲಿಸುವಂತೆ ಪನ್ನಾ ಪೊಲೀಸ್ ಠಾಣೆಗೆ ಸೂಚಿಸಿದ್ದಾರೆ.
ಇನ್ನೂ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಟೇರಿಯಾ, ನಾನು ಗಾಂಧಿಯನ್ನು ನಂಬುವ ವ್ಯಕ್ತಿ, ಈ ರೀತಿ ಮಾತನಾಡಲಾರೆ. ಸಂವಿಧಾನ ಉಳಿಸಲು ಮೋದಿ ಅವರನ್ನು ಸೋಲಿಸಬೇಕು ಅನ್ನೋ ಅರ್ಥದಲ್ಲಿ ಮಾತನಾಡಿದ್ದೇನೆ. ದಲಿತರು, ಆದಿವಾಸಿಗಳನ್ನು ರಕ್ಷಿಸಲು ಹಾಗೂ ನಿರುದ್ಯೋಗ ಸಮಸ್ಯೆಯನ್ನು ತೊಡೆದುಹಾಕಲು ಮೋದಿಯನ್ನು ಸೋಲಿಸುವುದು ಅವಶ್ಯಕ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.










