ಚಿಕ್ಕಮಗಳೂರು : ಅದೈತ ಸಿದ್ದಾಂತ ಪ್ರತಿಪಾದಕ ಜಗದ್ಗುರು ಶ್ರೀ ಆದಿಶಂಕರಾಚಾರ್ಯರ ಜಯಂತಿಯನ್ನು ನಗರದಲ್ಲಿ ಇಂದು ವಿಪ್ರ ಸಮುದಾಯ ಸಡಗರ, ಸಂಭ್ರಮದಿಂದ ಆಚರಿಸಿತು.
ಜಯಂತಿ ಪ್ರಯುಕ್ತ ಬೆಳಿಗ್ಗೆ ಶಂಕರಮಠದಲ್ಲಿ ಶ್ರೀ ಶಂಕರಾಚಾರ್ಯರ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಜರುಗಿತು. ಲಕ್ಷ್ಮೀನಾರಾಯಣ ಭಟ್ ತಂಡ ಮತ್ತು ಶ್ರೀ ಶಂಕರ ವೇದ ವಿದ್ಯಾರ್ಥಿ ವೃಂದದಿಂದ ರುದ್ರಮಂತ್ರ ಪಠಣ ನೆರವೇರಿತು.
ವಿದ್ಯಾಭಾರತಿ ಸಭಾಂಗಣದಲ್ಲಿ ಬ್ರಾಹ್ಮಣ ಮಹಾಸಭಾ ವತಿಯಿಂದ ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಉಪನಯನ, ಬ್ರಹ್ಮೋಪದೇಶ ಮಾಡಲಾಯಿತು, ವೇದಬ್ರಹ್ಮ ಸೀತಾರಾಮ ಅವಧಾನಿ ನೇತೃತ್ವದ ಋತ್ವಿಕರ ತಂಡದಿಂದ ಉಪನಯನದ ಧಾರ್ಮಿಕ ವಿಧಿವಿಧಾನಗಳು ನಡೆದವು.
ನೂರಾರು ವಿಪ್ರರು ಮತ್ತು ವೇದಘೋಷದ ನಡುವೆ ಶ್ರೀ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆ ಶಂಕರ ಮಠದಿಂದ ರಂಗಣ್ಣನವರ ಕಲ್ಯಾಣ ಮಂಟಪದ ವರೆಗೆ ನಡೆಯಿತು.
ಈ ವೇಳೆ ಮಾತನಾಡಿದ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಜೋಶಿ ಅವನತಿಯ ಅಂಚಿಗೆ ತಲುಪಿದ್ದ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಮಹಾತ್ಮರು ಶ್ರೀ ಶಂಕರಾಚಾರ್ಯರು ಎಂದು ಹೇಳಿದರು. ಮಹಾಸಭಾದ ಉಪಾಧ್ಯಕ್ಷ ಎ.ವಿ.ಅನಂತರಾಮಯ್ಯ, ನಿರ್ದೆಶಕ ಜಿ.ರಾಮಮೂರ್ತಿ, ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು.










