ಮೈಸೂರು : ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಾ.ರಾ. ಮಹೇಶ್ ಅವರು ಸಿಎಂ ಅವರ ಈ ಸ್ಥಿತಿಗೆ ನಾನೇ ಕಾರಣ ಎಂದು ಹೇಳಿದ್ದು, ಹೆಚ್. ವಿಶ್ವನಾಥ್ ಅವರನ್ನು ಜಿ.ಟಿ. ದೇವೇಗೌಡ ಅವರು ಸೇರಿದಂತೆ ಹಲವು ನಾಯಕರು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದು ಹೇಳಿದ್ದರು. ಆದರೂ ನಾನು ಪುಟ್ಟರಾಜು ಅವರ ಮಾತಿಗೆ ಬೆಲೆಕೊಟ್ಟು ವಿಶ್ವನಾಥ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಒಪ್ಪಿಕೊಂಡೆ, ಆದರಿಂದ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ನಾನು ಮಾಡಿದ ಅದೊಂದು ತಪ್ಪೇ ಸರ್ಕಾರದ ಈಗಿನ ಬೆಳವಣಿಗೆಗೆ ಕಾರಣ. ವಿಶ್ವನಾಥ್ ಅವರು ಪಕ್ಷಕ್ಕೆ ಸೇರಿಕೊಳ್ಳುವಾಗ ನಾನು ಪ್ರಾಮಾಣಿಕನಲ್ಲದಿದ್ದರೂ ಭ್ರಷ್ಟಾಚಾರಿಯಲ್ಲ ಎಂದು ಹೇಳಿದ್ದರು. ನಾವು ನಿಮ್ಮನ್ನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಮಾಡಿದ್ದೆವು. ಆದರೆ ನೀವು ನಮ್ಮನ್ನು ಜಾತಿವಾದಿಗಳು ಎಂದು ಹೇಳಿದ್ದೀರಿ. ನಾವು ಜಾತಿವಾದಿಗಳಾಗಿದ್ದರೆ ನಿಮ್ಮನ್ನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಮಾಡುತ್ತಿರಲಿಲ್ಲ.
ವಿಧಾನ ಸಭೆಯಲ್ಲಿ ಸಾ.ರಾ ಮಹೇಶ್ ಅವರು ವಿಶ್ವನಾಥ್ ಅವರ ವಿರುದ್ಧ ಆರೋಪಿಸಿದ್ದ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವನಾಥ್ ಅವರು ಸಾ.ರಾ ಮಹೇಶ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದರು. ಈ ಕುರಿತು ಪ್ರತಿಕ್ರಯಿಸಿದ ಸಾ.ರಾ. ಮಹೇಶ್ ಅವರು ಸದನದಲ್ಲಿ ನಾನು ಆಡಿರುವ ಮಾತಿಗೆ ನೀವು ಮಾನನಷ್ಟ ಮೊಕದ್ದಮೆ ಹೂಡಲು ಸಾಧ್ಯವಿಲ್ಲ. ಆದರೆ ಹಕ್ಕು ಚ್ಯುತಿ ಮಂಡಿಸಲು ಅವಕಾಶ ಇದೆ. ನೀವು ಸೋಮವಾರ ಬಂದು ನನ್ನ ವಿರುದ್ಧ ಹಕ್ಕು ಚ್ಯುತಿ ಮಂಡಿಸಿ ಎಂದು ಸವಾಲೆಸೆದರು.










