ಶಿವರಾಜ್ ಕುಮಾರ್ ಅವರು ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ವರುಣಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿದ್ದು, ಇದಕ್ಕೆ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಅದರಲ್ಲೂ ಮುಖ್ಯವಾಗಿ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಶಿವರಾಜ್ ಕುಮಾರ್ ಅವರ ನಡೆಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಈ ವಿಷಯದಲ್ಲಿ ಪುನೀತ್ ರಾಜ್ ಕುಮಾರ್ ಹೆಸರನ್ನು ಅವರು ಎಳೆತಂದಿದ್ದರು. ಇದಕ್ಕೆ ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು.
ಈ ಕುರಿತಂತೆ ಶಿವರಾಜ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಪರೋಕ್ಷವಾಗಿಯೇ ಅಸಮಾಧಾನ ಹೊರಹಾಕಿದ ಶಿವಣ್ಣ, ‘ಪ್ರತಾಪ್ ಸಿಂಹ ಮತ್ತು ಸೋಮಣ್ಣ ಇಬ್ಬರೂ ನನ್ನ ಆತ್ಮೀಯರು. ಹಾಗೆ ಹೇಳಬಾರದಿತ್ತು. ಅಲ್ಲದೇ, ಸೋಮಣ್ಣ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು ನನಗೆ ಗೊತ್ತಿರಲಿಲ್ಲ. ಕರೆದರೆ ಅವರ ಪರವಾಗಿಯೂ ನಾನು ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯವರು ಯಾರೂ ನನ್ನನ್ನ ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ವರುಣಾ ಕ್ಷೇತ್ರದಲ್ಲಿ ನಿನ್ನೆ ಶಿವಣ್ಣ ಪ್ರಚಾರದಲ್ಲಿ ತೊಡಗಿದ್ದರ ಕುರಿತು ಪ್ರತಾಪ್ ಸಿಂಹ, ‘ಪುನೀತ್ ರಾಜ್ ಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ. ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವರ ಭಾವ ಭಕುತಿಗೆ’ ಎಂದು ಟ್ವಿಟರ್ ನಲ್ಲಿ ಬರೆದಿದ್ದರು.










