ಬೆಂಗಳೂರು : ನಗರದಲ್ಲಿ ರೌಡಿಗಳ ಅಟ್ಟಹಾಸ ಮಿತಿಮೀರಿದ್ದು, ನಡುರಸ್ತೆಯಲ್ಲೇ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜೆಪಿ ನಗರದ 24 ನೇ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮಂಜ ಮತ್ತು ನವೀನ್ ಹತ್ಯೆಗೊಳಾದವರು ಎನ್ನಲಾಗಿದ್ದು, ನವೀನ್ ಬಿಲ್ಡರ್ ಒಬ್ಬರ ಮಗನಾಗಿದ್ದು, ನಿನ್ನೆ ರಾತ್ರಿ ತನ್ನ ಸ್ನೇಹಿತ ಮಂಜನ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಐ ಟ್ವೆಂಟಿ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ 10 ಮಂದಿ ಇಬ್ಬರನ್ನೂ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೊಲೆಯಾದ ಮಂಜ ತಲಘಟ್ಟಪುರ ಮತ್ತು ಕುಮಾರಸ್ವಾಮಿ ಲೇಔಟ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ರೌಡಿ ಟ್ಯಾಬ್ಲೆಟ್ ರಘು ಎಂಬುವವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು, ಇದೇ ದ್ವೇಷಕ್ಕೆ ಟ್ಯಾಬ್ಲೆಟ್ ರಘು ಕಡೆಯವರು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ರಾತ್ರಿಯೇ ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್, ಡಿಸಿಪಿ ರೋಹಿಣಿ ಸೆಪೆಟ್ ಮತ್ತು ಡಿಸಿಪಿ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










