‘ಸೂಪರ್ ಸ್ಟಾರ್’ ಸಿನಿಮಾ ನಿರ್ದೇಶಕನ ವಿರುದ್ಧ ವಂಚನೆ ಆರೋಪ ; ಪ್ರಕರಣ ದಾಖಲು…

81
firstsuddi

ರಿಯಲ್ ಸ್ಟಾರ್ ಉಪೇಂದ್ರ ಸಹೋದರನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿರುವ ಚಿತ್ರ ‘ಸೂಪರ್ ಸ್ಟಾರ್ ಸಿನಿಮಾಗೆ ಇದೀಗ ಸಂಕಷ್ಟ ಎದುರಾಗಿದೆ. ಸೂಪರ್ ಸ್ಟಾರ್ ಚಿತ್ರ ನಿರ್ದೇಶಕ ವೆಂಕಟೇಶ ಬಾಬು ವಿರುದ್ಧ ಚಿತ್ರದ ನಿರ್ಮಾಪಕ ಮೈಲಾರಪ್ಪ ಎಂಬುವರು ದೂರು ನೀಡಿದ್ದಾರೆ. 1 ಕೋಟಿ 10 ಲಕ್ಷ ವಂಚನೆ ಮಾಡಿದ ಆರೋಪದಡಿ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಂಕಟೇಶ್ ಬಾಬು ಅವರು ಸಿನಿಮಾ ಸೂಪರ್ ಹಿಟ್ ಆಗುತ್ತದೆ, ಹಣ ಬರುತ್ತದೆ ಎಂದು ಪ್ರಚೋದನೆ ನೀಡಿದ್ದರು. ಹಾಗಾಗಿ ಮಾತೃಶ್ರೀ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಮೈಲಾರಪ್ಪ ಹಣ ಹೂಡಿದ್ದರು. ಆದರೆ ಕೊವಿಡ್ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ವಲ್ಪ ದಿನ ಸ್ಥಗಿತಗೊಂಡಿತ್ತು. ನಂತರ ಸತ್ಯನಾರಾಯಣ ಎಂಬುವವರ ಜೊತೆ ಸೇರಿ ಚಿತ್ರದ ಮಾಲೀಕತ್ವವನ್ನೇ ಬದಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

1 ಕೋಟಿ 10 ಲಕ್ಷ ರೂಪಾಯಿ ಪಡೆದು, ಅದನ್ನು ಕಲಾವಿದರಿಗೂ ನೀಡದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಮೊದಲು ಹೂಡಿದ್ದ ಬಂಡವಾಳವನ್ನು ವಾಪಾಸ್ ಕೇಳಲು ಹೋದಾಗ ಪ್ರಾಣಬೆದರಿಕೆ ಮತ್ತು ಧಮ್ಕಿ ಹಾಕಿದ್ದಾರೆ ಎಂದು ನಿರ್ಮಾಪಕ ಮೈಲಾರಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.