ಹಾಸನ : ಮಗಳನ್ನು ಚುಡಾಯಿಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಬಾಲಕಿ ತಂದೆಯ ಮೇಲೆ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಆಲೂರು ತಾಲ್ಲೂಕಿನ ಜಯಂತಿನಗರದಲ್ಲಿ ನಡೆದಿದೆ.
ಆಲೂರು ತಾಲ್ಲೂಕಿನ ಹಲಸೂರು ಗ್ರಾಮದ ಪ್ರದೀಪ್ ಮೇಲೆ ಕಾರಗೋಡು ಗ್ರಾಮ ಪಂಚಾಯತ್ ಸದಸ್ಯ ಕಾರ್ತಿಕ್ ಹಾಗು ಅರ್ಜುನ್ ಎಂಬುವವರು ಹಲ್ಲೆ ನಡೆಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಪ್ರದೀಪ್ ಪುತ್ರಿಯನ್ನು ಅರ್ಜುನ್ ರೇಗಿಸಿದ್ದ. ಹೀಗಾಗಿ ಅರ್ಜುನ್ ಗೆ ಪ್ರದೀಪ್ ಬುದ್ಧಿವಾದ ಹೇಳಿದ್ದರು. ಇದೇ ವಿಷಯವಾಗಿ ಬಾಲಕಿಯ ತಂದೆ ಮತ್ತು ಯುವಕ ಅರ್ಜುನ್ ನಡುವೆ ಗಲಾಟೆಯಾಗಿತ್ತು. ಇದೇ ದ್ವೇಷ ಇಟ್ಟುಕೊಂಡು ನಿನ್ನೆ ಪ್ರದೀಪ್ ಅವರು ಕಾರಿನಲ್ಲಿ ಹೋಗುತ್ತಿರುವಾಗ ಅರ್ಜುನ್ ತನ್ನ ಸ್ನೇಹಿತ ಕಾರ್ತಿಕ್ ಜೊತೆ ಸೇರಿಕೊಂಡು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಲೆ, ಕುತ್ತಿಗೆ, ಕೈ, ಎದೆಗೆ ಮನಸೋ ಇಚ್ಚೆ ಹಲ್ಲೆ ನಡೆಸಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಪ್ರದೀಪ್, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಘಟನೆ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










