ವಿವಾದ ಸೃಷ್ಟಿಸಿದ ಭಾಷಣ – ಹೇಳಿಕೆ ಹಿಂಪಡೆದ ತೇಜಸ್ವಿ ಸೂರ್ಯ.

80
firstsuddi

ಬೆಂಗಳೂರು: : ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿದ್ದ ‘ಹಿಂದೂ ಪುನರುಜ್ಜೀವನ’ದ ಹೇಳಿಕೆ ವಿವಾದವಾಗುತ್ತಿದ್ದಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಹಿಂದೂ ಪುನರುಜ್ಜೀವನ’ ಎಂಬ ವಿಷಯದ ಕುರಿತು ಮಾತನಾಡಿದ್ದೆ. ನನ್ನ ಭಾಷಣದ ಕೆಲವು ಹೇಳಿಕೆಗಳು ವಿವಾದ ಸೃಷ್ಟಿಸಿವೆ. ಹಾಗಾಗಿ ನಾನು ನನ್ನ ಹೇಳಿಕೆಗಳನ್ನು ಹಿಂಪಡೆಯುತ್ತೇನೆ” ಎಂದು ತಿಳಿಸಿದ್ದಾರೆ.

ಡಿಸೆಂಬರ್ 25ರಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ತೇಜಸ್ವಿ ಸೂರ್ಯ, “ಹಿಂದೂ ಧರ್ಮದಿಂದ ಮತಾಂತರಗೊಂಡಿರುವ ಮುಸ್ಲಿಮರು ಹಾಗು ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ. ಹೀಗೆ ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನೂ ಹಿಂದೂ ಧರ್ಮಕ್ಕೆ ಕರೆತರಬೇಕು. ಚೀನಾ, ಜಪಾನಿಗೆ ಮತಾಂತರಗೊಂಡವರನ್ನು ಭಾರತಕ್ಕೆ ತರಬೇಕು. ಟಿಪ್ಪು ಜಯಂತಿಯಂದೇ ನಾವು ಹಿಂದೂ ಧರ್ಮದ ಪುನರುಜ್ಜೀವನ ಮಾಡಬೇಕು” ಎಂದು ಕರೆ ಕೊಟ್ಟಿದ್ದರು. ಇವರ ಈ ಹೇಳಿಕೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಸಂಸದನ ಈ ಹೇಳಿಕೆಗಳನ್ನು ಖಂಡಿಸಿ ಅನೇಕರು ಆಕ್ರೋಶ ಹೊರಹಾಕಿದ್ದರು.