ಹುಬ್ಬಳ್ಳಿ ಹಿಂಸಾಚಾರ ಪ್ರಕರಣ – 100ಕ್ಕೂ ಹೆಚ್ಚು ಮಂದಿಯ ಬಂಧನ…

49
firstsuddi

ಹುಬ್ಬಳ್ಳಿ : ಪ್ರಚೋದನಕಾರಿ ಪೋಸ್ಟ್ ವಿರೋಧಿಸಿ ನಗರದಲ್ಲಿ ನಡೆದ ಹಿಂಸಾಚಾರ ಪ್ರಕರಣ ಸಂಬಂಧ ನೂರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ನಗರದ ಆನಂದನಗರದ ನಿವಾಸಿ ಅಭಿಷೇಕ್ ಹಿರೇಮಠ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ವೊಂದು ವೈರಲ್ ಆಗಿದ್ದು, ಈ ಪೋಸ್ಟ್’ಗೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಪ್ರತಿಭಟನೆ ನಡೆದಿತ್ತು.

ಕೆಲವರು ಪ್ರತಿಭಟನೆಯನ್ನು ತೀವ್ರಗೊಳಿಸಿ, ಸ್ಥಳದಲ್ಲಿದ್ದ ವಾಹನಗಳ ಮೇಲೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭಿಸಿದ್ದರು. ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣ ಸಂಬಂಧ ಇದೀಗ ನೂರಾರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ಲಾಭು ರಾಮ್ ಅವರು ತಿಳಿಸಿದ್ದಾರೆ.

ಈ ನಡುವೆ ನಗರದಲ್ಲಿ ಹೇರಲಾಗಿದ್ದ ನಿಷೇಧಾಜ್ಞೆ ಆದೇಶವನ್ನು ಏಪ್ರಿಲ್ 20ರವರೆಗೆ ವಿಸ್ತರಿಸಲಾಗಿದೆ. ಅಲ್ಲದೆ, ಪರಿಸ್ಥಿತಿ ಹದಗೆಡದಂತೆ ಇತರೆ ಜಿಲ್ಲೆಗಳಿಗೆ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.