ಹೃದಯಾಘಾತದಿಂದ ಹೆಸರಾಂತ ಗಾಯಕ ಕೃಷ್ಣಕುಮಾರ್ ಕುನ್ನತ್ ನಿಧನ…

93
firstsuddi

ಕೋಲ್ಕತ್ತಾ: ಬಾಲಿವುಡ್ ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್(53)ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕೋಲ್ಕತ್ತಾದ ನಜ್ರುಲ್ ಮಂಚಾ ಆಡಿಟೋರಿಯಂನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿದ್ದ ವೇಳೆ ಕುಸಿದು ಬಿದ್ದ ಕೆಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆಸ್ಪತ್ರೆಗೆ ತಲುಪುವ ಮೊದಲೇ ವಿಧಿವಶರಾಗಿದ್ದರು ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗ್ತಿದೆ.

ಕೋಲ್ಕತ್ತಾದಲ್ಲಿ ಆಯೋಜನೆ ಮಾಡಲಾಗಿದ್ದ ಕಾನ್ಸರ್ಟ್ ನಲ್ಲಿ ಪಾಲ್ಗೊಂಡಿದ್ದ ಕೃಷ್ಣಕುಮಾರ್ ಕುನ್ನತ್ ಸುಮಾರು ಒಂದೂವರೆ ಗಂಟೆ ಕಾಲ ಹಾಡಿದ್ದರು. ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಬೆಂಗಾಲಿ ಭಾಷೆಗಳಲ್ಲಿ 3 ದಶಕಗಳ ಕಾಲ ಕೆಕೆ ಹಾಡಿದ್ದರು. ಇನ್ನು ಗಾಯಕ ಕೆಕೆ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಬಾಲಿವುಡ್ ಗಣ್ಯರು, ಗಾಯಕರು ಸಂತಾಪ ಸೂಚಿಸಿದ್ದಾರೆ.

ನರೇಂದ್ರ ಮೋದಿ ಅವರು, ಕೆಕೆ ಎಂದೇ ಖ್ಯಾತರಾಗಿರುವ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಹಾಡುಗಳು ಎಲ್ಲ ವಯೋಮಾನದ ಜನರೊಂದಿಗೆ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಅವರ ಹಾಡುಗಳ ಮೂಲಕ ನಾವು ಅವರನ್ನು ಸದಾ ಸ್ಮರಿಸುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖ ತಡೆದುಕೊಳ್ಳಲು ಶಕ್ತಿಕೊಡಲಿ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.