ಹೆಣ್ಣುಮಗುವಿನ ತಾಯಿಯಾದ ನಟಿ ಅದಿತಿ ಪ್ರಭುದೇವ.

21
firstsuddi

ಅಚ್ಚ ಕನ್ನಡದಲ್ಲಿ ಸ್ವಚ್ಚವಾಗಿ ಮಾತಾಡುವ ವೈಖರಿ, ಸೌಂದರ್ಯ ಹಾಗೂ ನಟನೆಯಿಂದ ಕನ್ನಡಿಗರ ಪ್ರೀತಿ ಗಳಿಸಿರುವ ನಟಿ ಅದಿತಿ ಪ್ರಭುದೇವ ತಾಯಿಯಾಗಿದ್ದಾರೆ. ಹೆಣ್ಣು ಮಗುವಿಗೆ ಅವರು ಜನ್ಮ ನೀಡಿದ್ದಾರೆ.

ಏಪ್ರಿಲ್ 4ರಂದೇ ಹೆಣ್ಣುಮಗುವಿಗೆ ಜನ್ಮ ನೀಡಿರುವ ನಟಿಯು, ಯುಗಾದಿಯಂದು ತಮ್ಮ ಇನ್ಸ್ಟಾ ಖಾತೆಯ ಮೂಲಕ ಮಗುವಿನ ಜನನದ ಶುಭಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗುವಿನ ಕೈ ತಾನು ಹಾಗೂ ಪತಿ ಯಶಸ್ ಕೈ ಮೇಲಿರುವ ಚಿತ್ರ ಹಂಚಿಕೊಂಡಿರುವ ನಟಿ, ‘ನಮ್ಮನೆ ಮಹಾಲಕ್ಷ್ಮಿ’ ಎಂದು ಬರೆದುಕೊಂಡಿದ್ದು, ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.

2022ರ ನವೆಂಬರ್​ನಲ್ಲಿ ಅದಿತಿ ಪ್ರಭುದೇವ ಹಾಗೂ ಕಾಫಿ ಪ್ಲ್ಯಾಂಟರ್ ಯಶಸ್ ಪಾಟ್ಲಾ ಅವರ ಮದುವೆ ನೆರವೇರಿತ್ತು. ಕಳೆದ ಜನವರಿಯಲ್ಲಿ ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವುದಾಗಿ ಅದಿತಿ ಪ್ರಭುದೇವ ಅವರು ಘೋಷಿಸಿದ್ದರು. ಆ ಬಳಿಕ ಸಾಕಷ್ಟು ಸರಣಿ ಪ್ರಗ್ನೆನ್ಸಿ ಫೋಟೋಶೂಟ್‌ನ ಫೋಟೋಗಳನ್ನು ಹಂಚಿಕೊಂಡಿದ್ದರು. ಮಗು ಹುಟ್ಟುವ ವಾರದ ಮುಂಚೆ ಕೂಡಾ ನಟಿ ಫೋಟೋಶೂಟ್ ಮಾಡಿಸಿದ್ದರು. ಇದೀಗ ಅದಿತಿ ಹಂಚಿಕೊಂಡಿರುವ ಸುದ್ದಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಅದಿತಿ ಪ್ರಭುದೇವ ಅವರು ಚಿತ್ರರಂಗಕ್ಕೆ ಕಾಲಿಟ್ಟು ಕೆಲವು ವರ್ಷಗಳು ಕಳೆದಿವೆ. 2017ರಲ್ಲಿ ಬಂದ ‘ಧೈರ್ಯಂ’ ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟಿಸಿದರು. ಇತ್ತೀಚೆಗೆ ಅವರು ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಈಗ ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಮತ್ತೆ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಲಿ ಎಂದು ಅಭಿಮಾನಿಗಳು ಬಯಸಿದ್ದಾರೆ.