ಬೆಳಗಾವಿ : ಅಗ್ನಿಪಥ್ ವಿರೋಧಿಸಿ ಸೇನಾಕಾಂಕ್ಷಿಗಳು ಬೆಳಗಾವಿಗೆ ಬರುವುದನ್ನು ತಡೆಹಿಡಿದಿದ್ದಕ್ಕೆ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ಹೊರಹಾಕಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಅಧಿಕಾರ ಎಲ್ಲರಿಗೂ ಇದೆ. ಗಾಂಧೀಜಿಯವರು ಕಲಿಸಿ ಕೊಟ್ಟಂತಹ ಸತ್ಯಾಗ್ರಹ ಹೋರಾಟಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ. ಕಾಂಗ್ರೆಸ್ ನವರು ಕೂಡ ಅದನ್ನೇ ಬಯಸುತ್ತಾರೆ. ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಅವರಿಗೆ ಗೊತ್ತಾಗಿರುವುದರಿಂದ ಪಥ ಸಂಚಲನ ಮಾಡಿ, ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಆದರೆ ಈ ರೀತಿ ಎಷ್ಟು ದಿನ ಮಾಡುತ್ತಾರೆ? ಎಷ್ಟು ದಿನ ಹೋರಾಟ ತಡೆಯಲು ಸಾಧ್ಯವಾಗುತ್ತದೆ? ಹೋರಾಟ ತಡೆಯಲು, ದಿಕ್ಕು ಬದಲಿಸಲು ಸಾಧ್ಯವಿಲ್ಲ. ಬೀಸುವ ಗಾಳಿಯನ್ನು ಯಾರೂ ತಡೆಯೋಕಾಗಲ್ಲ, ಉರಿಯೋ ಸೂರ್ಯನನ್ನು ಸಹ ಯಾರೂ ನಂದಿಸಲು ಸಾಧ್ಯವಾಗಲ್ಲ ಎಂದು ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ 45 ಸಾವಿರ ಹುದ್ದೆ ಭರ್ತಿ ಆಗ್ತಿತ್ತು. 1 ಲಕ್ಷದ 35 ಸಾವಿರ ಹುದ್ದೆಗಳು ಖಾಲಿ ಇರುವಾಗ ಅವರಿಗೆ ಹೊಳೆದಿದ್ದು ಅಗ್ನಿಪಥ. ಈ ಯೋಜನೆಯಲ್ಲಿ ರಿಟೈರ್ ಮೆಂಟ್ ಆದವರನ್ನು ಬಿಜೆಪಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಇಟ್ಟುಕೊಳ್ತೀವಿ ಅಂತಿದ್ದಾರೆ. ಹಾಗಾದರೆ ಇವರ ಮೆಂಟಾಲಿಟಿ ಯಾವ ಮಟ್ಟಕ್ಕಿದೆ? ಅಮಿತ್ ಶಾ ಮಗ ಜಯ್ ಶಾಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ. ಯಾವ ಮಂತ್ರಿ, ಎಂಎಲ್ ಎ ಮಕ್ಕಳು ಅಗ್ನಿಪಥ್ ಕೆಲಸಕ್ಕೆ ಹೋಗ್ತಾರೆ. 16 ಕೋಟಿ ಉದ್ಯೋಗ ಕೊಡಲಾಗದಿದ್ದಕ್ಕೆ ಅಗ್ನಿಪಥ ಡ್ರಾಮಾ ರಿಲೀಸ್ ಮಾಡಿದ್ದಾರೆ. ಪ್ರತಿಯೊಂದರಲ್ಲೂ ಆರ್ಎಸ್ಎಸ್ ವಾದ ತರುತ್ತಿದ್ದಾರೆ ಎಂದು ಆರೋಪಿಸಿದರು.
ಉರಿಯುವ ಬೆಂಕಿಗೆ ಕಾಂಗ್ರೆಸ್ ತುಪ್ಪ ಸುರಿಯುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯುವಕರನ್ನು, ಜನರನ್ನು ಎತ್ತಿ ಕಟ್ಟಿರುವ ರೂಢಿ ಬಿಜೆಪಿಯವರಿಗಿದೆ. ನಾನು ಅಗ್ನಿಪಥ್ ಯೋಜನೆ ವಿರುದ್ಧ ಇಲ್ಲ. ಯೋಜನೆಯಲ್ಲಿ ಬದಲಾವಣೆ ಆಗಬೇಕಿದೆ. ಎಂಟು ವರ್ಷದಲ್ಲಿ 16 ಕೋಟಿ ಕೆಲಸ ಕೊಡುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಬಳಿಕ ಪಕೋಡ ಮಾರಿ ಎಂದು ಹೇಳಿದರು. ಈಗ ಅಗ್ನಿಪಥದಲ್ಲಿ ಅಗ್ನಿ ವೀರರು ಅಂತಿದ್ದಾರೆ. ಇದೆಲ್ಲ ನೋಡಿದ್ರೆ ಏನನ್ನಬೇಕು ಎಂದು ಪ್ರಶ್ನಿಸಿದ್ರು.
ಅಗ್ನಿವೀರ ಆಗಿ ನಾಲ್ಕು ವರ್ಷ ಆದ ಮೇಲೆ ಅವರ ಭವಿಷ್ಯ ಏನು? 75 ವರ್ಷದ ರಕ್ಷಣಾ ಸಚಿವರು, 71 ವರ್ಷದ ಪ್ರಧಾನಿಗೆ ರಿಟೈರ್ ಮೆಂಟ್ ಇಲ್ಲ. ನಮ್ಮವರೇ 76 ವರ್ಷದ ಪ್ರಕಾಶ್ ಹುಕ್ಕೇರಿ ಎಂಎಲ್ಸಿ ಆಗಿದ್ದಾರೆ. 21 ಅಥವಾ 25 ವರ್ಷಕ್ಕೆ ರಿಟೈರ್ ಮೆಂಟ್ ಯಾರಾದರೂ ಸಹಿಸಿಕೊಳ್ತಾರಾ? ಯಾವ ಯುವಕರ ತಂದೆ ತಾಯಿ ಸಹಿಸಿಕೊಳ್ತಾರೆ. ಅವರ ಜಾಬ್ ಸೆಕ್ಯೂರಿಟಿ ಇರಲಿ ಅನ್ನೋದು ನನ್ನ ಅಭಿಪ್ರಾಯ. ಯಾವುದೇ ಯೋಜನೆ ಇರಲಿ ಪರ ವಿರೋಧ ಇರುತ್ತದೆ. ಅದನ್ನ ಸುಧಾರಿಸಿಕೊಂಡು ಮಾಡಲಿ ಅನ್ನೋದು ನನ್ನ ಅಭಿಪ್ರಾಯ ಎಂದು ಹೆಬ್ಬಾಳ್ಕರ್ ತಿಳಿಸಿದರು.










