ಚಿಕ್ಕಮಗಳೂರು : ಕಾರ್ಗಿಲ್ ವಿಜಯ ದಿನವನ್ನು ಮಾಜಿ ಸೈನಿಕರು ನಗರದ ಎಐಟಿ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ಸಂಭ್ರಮದಿಂದ ಆಚರಿಸಿದರು.
ವಿಜಯೋತ್ಸವದ ಅಂಗವಾಗಿ ರಾಷ್ಟ್ರಧ್ವಜ ಮತ್ತು ಮಿಲಿಟರಿ ಧ್ವಜದೊಂದಿಗೆ ಭಾರತ್ ಮಾತಾಕೀ ಜೈ, ವಂದೇ ಮಾತರಂ ಘೋಷಣೆ ಕೂಗುತ್ತಾ ಮಾಜಿ ಸೈನಿಕರು ಮತ್ತು ಅವರ ಕುಟುಂಬದವರು ಎಐಟಿ ವೃತ್ತದಿಂದ ಕಾಲೇಜಿನವರೆಗೆ ಬೆಳಿಗ್ಗೆ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ಸಾಗಿ ಬಂದ ಮಾಜಿ ಸೈನಿಕರನ್ನು ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು, ನಂತರ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಗಳಿಗೆ ಮಾಜಿ ಸೈನಿಕರು ಪುಷ್ಪ ನಮನ ಮತ್ತು ಗೌರವ ನಮನವನ್ನು ಸಲ್ಲಿಸಿದರು.
ಯುದ್ದದಲ್ಲಿ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ದೇಶ ಕಾಯುವ ಸೈನಿಕರು ನಮ್ಮ ನಿಜವಾದ ಹಿರೋಗಳು, ಅವರನ್ನು ಎಲ್ಲರೂ ಗೌರವಾದರಗಳಿಂದ ಕಾಣಬೇಕು ಎಂದರು.
ಇಂದಿನ ವಿದ್ಯಾರ್ಥಿಗಳು ಮತ್ತು ಯುವ ಜನತೆಯಲ್ಲಿ ಸೈನಿಕರಾಗುವ ಆ ಮೂಲಕ ದೇಶ ಸೇವೆ ಮಾಡುವ ಮನೋಭಾವ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಆಯೋಜಕ ನಿವೃತ್ತ ಯೋಧ ಪ್ರಕಾಶ್ ಶೆಟ್ಟಿ ಕಾರ್ಗಿಲ್ ಯುದ್ದದಲ್ಲಿ ನಮ್ಮ ಸೈನಿಕರು ತೋರಿದ ಶೌರ್ಯ, ಪರಾಕ್ರಮ ಮತ್ತು ಅವರ ಬಲಿದಾನದ ಸ್ಮರಣೆಗಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ದೇಶದ ಗಡಿಯನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅದರ ರಕ್ಷಣೆಗಾಗಿ ತಮ್ಮ ಪ್ರಾಣಾರ್ಪಣೆ ಮಾಡುವ ಸೈನಿಕರನ್ನು ದೇಶದ ಜನತೆ ಮರೆಯಬಾರದು ಎಂದು ಹೇಳಿದರು.
ಇದೇ ವೇಳೆ ಕಾರ್ಗಿಲ್ ಯುದ್ದದ ವೀಡಿಯೋ ಪ್ರದರ್ಶಿಸಲಾಯಿತು, ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು, ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಪ್ರಕಾಶ್ ರಾವ್ ಅಧ್ಯಕ್ಷತೆ ವಹಿಸಿದ್ದರು, ಪಾಲಿಟೆಕ್ನಿಕ್ ಪ್ರಾಂಶುಪಾಲ ಸಚ್ಚಿನ್, ಮಾಜಿ ಸೈನಿಕರಾದ ಕ್ಯಾಪ್ಟನ್ ಕೃಷ್ಣೇಗೌಡ, ಹವಾಲ್ದಾರ್ ದಿನೇಶ್, ಹೇಮರಾಜ್, ಮೋಹನ್, ಸುರೇಂದ್ರ, ಶಾಂತಪ್ಪ, ಪುಟ್ಟರಾಜು, ಅರುಣಾಚಲ, ಸೋಮಶೇಖರಪ್ಪ, ರವೀಂದ್ರ, ವಿನೋದ್ ಕುಮಾರ್, ಹೆಚ್.ಡಿ.ಸುರೇಶ್, ರೇವಣ್ಣ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪೂನಂ ಕಾರ್ಯಕ್ರಮವನ್ನು ನಿರೂಪಿಸಿದರು, ಕೆ.ಕೆ.ಶರಣ್ ಸ್ವಾಗತಿಸಿದರು, ನಿಶ್ಚಿತ ವಂದಿಸಿದರು.










