ಅಭಿಷೇಕ್ ಹೆಸರು ದಯವಿಟ್ಟು ರಾಜಕೀಯಕ್ಕೆ ತರಬೇಡಿ : ಸುಮಲತಾ ಅಂಬರೀಶ್

355
firstsuddi

ಬೆಂಗಳೂರು : ಅಂಬರೀಶ್ ಅವರ 9ನೇ ತಿಂಗಳ ಪುಣ್ಯಸ್ಮರಣೆಯ ಅಂಗವಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸಮಾಧಿಗೆ ತೆರಳಿ ಪೂಜೆಯನ್ನು ಸಲ್ಲಿಸಿದ್ದಾರೆ. ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ಗಲಾಟೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ನಡುವಿನ ಗಲಾಟೆಯಲ್ಲಿ ನಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ನಾನು ಅವರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿಲ್ಲ. ಇದೆಲ್ಲ ಸುಳ್ಳು, ಅಲ್ಲದೇ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಕೂಡಾ ಗಲಾಟೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಗಂಡ-ಹೆಂಡತಿ ಮಧ್ಯೆ ಮನೆ ಮುರಿಯುವ ಕೆಲಸ ಮಾಡಬೇಡಿ ಎಂದು ಸ್ಪಷ್ಟನೆ ನೀಡಿದರು.
ಬಳಿಕ ಅಭಿಷೇಕ್ ಅಂಬರೀಶ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿರುವ ವಿಷಯಕ್ಕೆ ಸಂಬಂಧಿಸದಂತೆ ಪ್ರತಿಕ್ರಯಿಸಿದ ಅವರು, ಅಭಿಷೇಕ್ ಹೆಸರು ದಯವಿಟ್ಟು ರಾಜಕೀಯಕ್ಕೆ ತರಬೇಡಿ. ಅವನು ಇನ್ನೂ ಸಿನಿಮಾ ಮಾಡಬೇಕಿದೆ. ಸದ್ಯಕ್ಕೆ ಅವನು ರಾಜಕೀಯ ಪ್ರವೇಶ ಮಾಡುವ ಸನ್ನಿವೇಶ ಇಲ್ಲ. ಒಂದು ವೇಳೆ ಅವನೇ ಈ ಬಗ್ಗೆ ನಿರ್ಧಾರ ಮಾಡಿದರೆ ಮುಂದೆ ನೋಡೋಣ. ಅಲ್ಲಿಯವರೆಗೂ ಅವನನ್ನು ರಾಜಕೀಯಕ್ಕೆ ಎಳೆದು ತರಬೇಡಿ.
ಫೋನ್ ಕದ್ದಾಲಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಕುರಿತು ತನಿಖೆಗೆ ನಾನು ಒತ್ತಾಯ ಮಾಡಿಲ್ಲ. ಚುನಾವಣೆ ವೇಳೆ ಫೋನ್ ಕದ್ದಾಲಿಕೆ ಆಗುತ್ತಿದ್ದರ ಬಗ್ಗೆ ಅನುಮಾನವಿತ್ತು. ಈಗ ಅದು ಬೆಳಕಿಗೆ ಬಂದಿದೆ. ಈ ವಿಚಾರವನ್ನು ಸಿಬಿಐಗೆ ವಹಿಸಿದ್ದಾರೆ. ಏನಾಗುತ್ತೋ ಕಾದು ನೋಡೋಣ ಎಂದರು. ಅಂಬರೀಶ್ ಅವರ ಪುಣ್ಯಸ್ಮರಣೆ ಪೂಜೆ ವೇಳೆ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.