ಚಿಕ್ಕಮಗಳೂರು : ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಬದುಕು ಮತ್ತು ಬರಹಗಳನ್ನು ಇಂದಿನ ಪೀಳಿಗೆ ಅಧ್ಯಯನ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಂಜಯ್ಯ ಸಲಹೆ ಮಾಡಿದರು.
ನಗರದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಜ್ಞಾನಪೀಠ ಪುರಸ್ಕೃತರ ಬದುಕು-ಬರಹ ಸರಣಿ ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.
ಬೇರೆ ಭಾಷೆಗಳಿಗಿಂತ ಹೆಚ್ಚು ಜ್ಞಾನಪೀಠ ಪಡೆದ ಹೆಗ್ಗಳಿಕೆ ಕನ್ನಡಕ್ಕಿದೆ, 8 ಹಿರಿಯ ಸಾಹಿತಿಗಳು ನಾಡಿಗೆ ಜ್ಞಾನಪೀಠವನ್ನು ತಂದು ಕೊಟ್ಟಿದ್ದಾರೆ ಅವರುಗಳ ಬದುಕು ಮತ್ತು ಬರಹಗಳನ್ನು ಅಧ್ಯಯನ ಮಾಡಿದರೆ ನೀವೂ ಸಹ ಭವಿಷ್ಯದಲ್ಲಿ ಕುವೆಂಪು, ಕಾರಂತರು ಅಥವಾ ಕಂಬಾರರಾಗಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಹಿತಿ ಡಾ|| ಯು.ಆರ್.ಅನಂತಮೂರ್ತಿ ಅವರ ಕುರಿತು ಉಪನ್ಯಾಸ ನೀಡಿದ ಐಡಿಎಸ್ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ|| ಹೆಚ್.ಎಂ.ಮಹೇಶ್ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರಕಿಸಿ ಕೊಟ್ಟವರು ಅನಂತಮೂರ್ತಿಯವರು. ಅವರು ದೊಡ್ಡ ಪ್ರಜಾಪ್ರಭುತ್ವವಾದಿ, ಖಂಡಿತವಾದಿ, ಸುಧಾರಣಾವಾದಿ, ಪ್ರಗತಿಪರ ಮತ್ತು ಎಡಪಂಥೀಯ ಚಿಂತಕ ಎಂದರು.
ಕನ್ನಡ ಸಾಹಿತ್ಯದಲ್ಲಿ ಅನಂತಮೂರ್ತಿಯವರದ್ದು ದೊಡ್ಡ ಬಿಂದುವಾದ ಹೆಸರು, ಸಾಹಿತಿಯಾಗಿ ಲೇಖಕರಾಗಿ, ಬರಹಗಾರರಾಗಿ, ಕಾದಂಬರಿಗಳ ಮೂಲಕ, ಸಣ್ಣ ಕಥೆಗಳ ಮೂಲಕ ಆಧುನಿಕ ಚಿಂತನೆಗಳನ್ನು ಹೊರಹೊಮ್ಮಿಸುವ ಕೆಲಸ ಮಾಡಿದವರು ಅನಂತಮೂರ್ತಿ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಾಸವಿ ವಿದ್ಯಾ ಸಂಸ್ಥೆಯ ಸಹಕಾರ್ಯದರ್ಶಿ ಜಿ.ಎ.ದಿನೇಶ್ ಗುಪ್ತಾ ಕನ್ನಡ ಭಾಷೆಯನ್ನು ನಾವು ದೈನಂದಿನ ಬದುಕಿನಲ್ಲಿ ಬಳಸಿದರೆ ಮಾತ್ರ ಅದು ಉಳಿಯುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಜಿಲ್ಲಾದ್ಯಂತ ಒಂದು ತಿಂಗಳ ಕಾಲ ನಡೆಸಿದ ಸರಣಿ ಉಪನ್ಯಾಸ ಕಾರ್ಯಕ್ರಮಗಳಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜ್ಞಾನಪೀಠ ಪುರಸ್ಕøತರ ಬದುಕು ಮತ್ತು ಬರಹಗಳನ್ನು ಪರಿಷತ್ ಪರಿಚಯಿಸಿದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಕುವೆಂಪು ವಿರಚಿತ ಗೀತೆಗಳ ಗಾಯನ ಮಾಡಿದರು. ಸಾಹಿತಿ ಡಾ|| ಯು.ಆರ್.ಅನಂತಮೂರ್ತಿ ಅವರ ಬದುಕು-ಬರಹ ಕುರಿತು ರಸಪ್ರಶ್ನೆ ಕಾರ್ಯಕ್ರಮ ಜರುಗಿತು.
ಪ್ರಾಂಶುಪಾಲ ಬಿ.ಆರ್.ಕುಮಾರ್, ಜಿಲ್ಲಾ ಕಸಾಪ ಪ್ರಧಾನ ಸಂಚಾಲಕ ಎಂ.ಆರ್.ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಚಂದ್ರಯ್ಯ, ಸಾಹಿತಿ ರವೀಶ್ ಕ್ಯಾತನಬೀಡು ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್ ಸ್ವಾಗತಿಸಿದರು, ಸಾಹಿತಿ ರಮೇಶ್ ಬೊಂಗಾಳೆ ವಂದಿಸಿದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಬದುಕು ಮತ್ತು ಬರಹಗಳನ್ನು ಇಂದಿನ ಪೀಳಿಗೆ ಅಧ್ಯಯನ ಮಾಡಬೇಕು...










