ಚಿಕ್ಕಮಗಳೂರು: ಇಂದಿನ ಯುವತಿಯರು ಸ್ವಾವಲಂಬಿಗಳಾಗಿ ಬೆಳೆಯಬೇಕಾದರೆ ಎಂ.ಕೆ.ಇಂದಿರಾ ಅವರ ಕಾದಂಬರಿಗಳನ್ನು ಓದಬೇಕು : ದೀಪಾ ಹಿರೇಗುತ್ತಿ

364
firstsuddi

ಚಿಕ್ಕಮಗಳೂರು : ಇಂದಿನ ಯುವತಿಯರು ಸ್ವಾವಲಂಬಿಗಳಾಗಿ ಮತ್ತು ಸ್ವಾಭಿಮಾನಿಗಳಾಗಿ ಬೆಳೆಯಬೇಕಾದರೆ ಎಂ.ಕೆ.ಇಂದಿರಾ ಅವರ ಕಾದಂಬರಿಗಳನ್ನು ಓದಬೇಕು ಎಂದು ಸಾಹಿತಿ ದೀಪಾ ಹಿರೇಗುತ್ತಿ ಸಲಹೆ ಮಾಡಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ ನಗರದ ಬಿಜಿಎಸ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಎಂ.ಕೆ.ಇಂದಿರಾ ಅವರ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇವಲ 6ನೇ ತರಗತಿ ಓದಿ 12ನೇ ವಯಸ್ಸಿನಲ್ಲಿ ವಿವಾಹವಾಗಿ ಎಳೆಯ ವಯಸ್ಸಿನಲ್ಲೇ ಸಂಸಾರದ ಭಾರ ಹೊತ್ತು 44ನೇ ವಯಸ್ಸಿನಲ್ಲಿ ಬರೆಯಲಾರಂಭಿಸಿ 64 ಕ್ಕೂ ಹೆಚ್ಚು ಅಮೂಲ್ಯ ಕಾದಂಬರಿಗಳನ್ನು ನೀಡಿ ಕರ್ನಾಟಕದ ಪ್ರಮುಖ ಬರಹಗಾರ್ತಿಯಾದ ಎಂ.ಕೆ.ಇಂದಿರಾ ಅವರ ಬದುಕು ವಿಶಿಷ್ಠವಾದುದು ಎಂದರು.
ಸಂಪ್ರದಾಯಸ್ಥ ಕುಟುಂಬ ಮತ್ತು ಸಂಪ್ರದಾಯಸ್ಥ ಸಮಾಜದಲ್ಲಿ ಇದ್ದುಕೊಂಡೇ ಸುತ್ತಮುತ್ತಲಿನ ಅನ್ಯಾಯಗಳನ್ನು ವಿರೋಧಿಸುವುದರ ಜೊತೆಗೆ ಸಮಕಾಲಿನ ಸವಾಲುಗಳನ್ನು ಬರಹದ ಮೂಲಕ ಎದುರಿಸಿದ ಎಂ.ಕೆ.ಇಂದಿರಾ ಅವರು ಕಾಲಪ್ರವಾಹದ ವಿರುದ್ದ ಈಜಿದ ದಿಟ್ಟ ಮಹಿಳೆ ಎಂದು ಹೇಳಿದರು.
ಎಂ.ಕೆ.ಇಂದಿರಾ ಅವರ ಕೃತಿಯಲ್ಲಿ ಸಾಮಾಜಿಕ ಚಿಂತನೆ ವಿಷಯ ಕುರಿತು ಉಪನ್ಯಾಸ ನೀಡಿದ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯೆ ರೇಖಾ ಪ್ರೇಮ್‍ಕುಮಾರ್ ಜ್ಞಾನವನ್ನು ವೃದ್ದಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಶ್ರೀನಿವಾಸ್ ಪ್ರತಿಷ್ಠಾನದ ವತಿಯಿಂದ ಎಂ.ಕೆ.ಇಂದಿರಾ ಅವರ ಹೆಸರಿನಲ್ಲಿ ದತ್ತಿ ಉಪನ್ಯಾಸ ಆರಂಭಿಸಲಾಗುವುದು, ಅವರ ಸಾಹಿತ್ಯಾವಲೋಕನ ಕೃತಿಯನ್ನು ಹೊರತರಲಾಗುವುದು ಎಂದು ಹೇಳಿದರು.
ಕಲಾಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಸಾಹಿತಿ ದೀಪಾ ಹಿರೇಗುತ್ತಿ, ರೇಖಾ ಪ್ರೇಮ್‍ಕುಮಾರ್, ಮಂಜುನಾಥಗೌಡ, ನೆ.ಲ.ಸುಬ್ರಹ್ಮಣ್ಯ, ನಾಗಶ್ರೀ ಅವರಿಗೆ ಕನ್ನಡಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾಲೇಜಿನ ಪ್ರಾಂಶುಪಾಲ ಜೆ.ಜಿ.ಸುರೇಂದ್ರ ಅಧ್ಯಕ್ಷತೆ ವಹಿಸಿದ್ದರು, ಲೇಖಕಿ ವಾಣಿ ಚಂದ್ರಯ್ಯನಾಯ್ಡು, ಸಾಂಸ್ಕøತಿಕ ಸಂಘಧ ಅಧ್ಯಕ್ಷ ಗಿರಿಧರ್ ಯತೀಶ್ ಎಂ.ಕೆ.ಇಂದಿರಾ ಅವರ ಪುತ್ರ ಎಂ.ಕೆ.ಮಂಜುನಾಥ್ ಹಾಗೂ ಕುಟುಂಬಸ್ಥರು, ಉಪನ್ಯಾಸಕರಾದ ಸಂತೋಷ್, ವಿಜಿತ್ ಉಪಸ್ಥಿತರಿದ್ದರು.