ಮುಂಬೈ : ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಹೈದರಾಬಾದ್ನ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋ ಹಾಕುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ, ಸ್ನೇಹಿತರೇ ಇಂದು ನನಗೆ ಬಹಳ ದುಃಖವಾಗುತ್ತಿದೆ. ಹೈದರಾಬಾದ್ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಆರೋಪಿಗಳು ನಂಬಿಕೆಗೆ ಅರ್ಹರಲ್ಲ ಎಂದು ದೇಶದ ಎಲ್ಲಾ ಮಹಿಳೆಯರಿಗೂ ಹೇಳಲು ಇಚ್ಚಿಸುತ್ತೇನೆ. ರಾತ್ರಿ ವೇಳೆ ಒಬ್ಬಂಟಿಯಾಗಿ ಹೋಗುವಾಗ ಎಚ್ಚರಿಕೆಯಿಂದ ಇರಿ. ನಿಮ್ಮ ಮಾನವನ್ನು ನೀವೇ ಉಳಿಸಿಕೊಳ್ಳಬೇಕು. ಏಕೆಂದರೆ, ನಿಮ್ಮ ಮಾನ ಉಳಿಸಲು ಇಲ್ಲಿ ಯಾರೂ ಬರುವುದಿಲ್ಲ. ನಾನು ಈ ದೇಶದ ಕಾನೂನಿಗೆ ಆರೋಪಿಗಳನ್ನು ಗೆಲ್ಲಿಗೇರಿಸಬೇಕು ಎಂದು ಹೇಳಲು ಬಯಸುತ್ತೇನೆ. ಒಂದು ವೇಳೆ ಗಲ್ಲಿಗೇರಿಸಲು ಆಗಲಿಲ್ಲ ಎಂದರೆ ಅವರನ್ನು ನಪುಂಸಕರನ್ನಾಗಿ ಮಾಡಬೇಕು. ಇದರಿಂದ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರೆ ಏನಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಇದರಿಂದ ಭಾರತದ ಕಾನೂನು ಎಷ್ಟು ಕಠಿಣವಾಗಿದೆ ಎಂದು ಅವರು ತಿಳಿದುಕೊಳ್ಳಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ನಾನು ಪ್ರಧಾನಿ ನರೇಂದ್ರ ಮೋದಿ, ಕಾನೂನು ಹಾಗೂ ಹೈದರಾಬಾದ್ ಪೊಲೀಸರಿಗೆ ಕೇಳಿಕೊಳ್ಳುತ್ತೇನೆ. ಮೋದಿ ಸರ್ಕಾರ ಎದ್ದೇಳಿ. ಈಗ ನಾವು ಈ ಕುರಿತು ಧ್ವನಿ ಎತ್ತದೇ ಇದ್ದರೆ ಮುಂದೆ ಇನ್ನಷ್ಟು ಇಂತಹ ಕೃತ್ಯಗಳು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.










