ಹಾಸನ : ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧದ ಪ್ರತಿಭಟನೆ ಕೆಲವರು ವೋಟ್‍ಬ್ಯಾಂಕ್‍ಗಾಗಿ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಎನ್.ಆರ್.ಸಿ ಜಾರಿಯಾದರೆ ಕೆಲವರಿಗೆ ತೊಂದರೆಯಾಗುತ್ತದೆ ಎಂದು ಜನರನ್ನು ಎತ್ತಿಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆಗೂ ಎನ್.ಆರ್.ಸಿ ಗೂ ಯಾವುದೇ ಸಂಬಂಧವಿಲ್ಲ. ಎನ್.ಆರ್.ಸಿಯನ್ನು ಮೊದಲು ಆರಂಭಿಸಿದ್ದೇ ಕಾಂಗ್ರೆಸ್ ನವರು. ಭಾರತಕ್ಕೆ ಯಾರು ಬೇಕಾದರೂ ಬಂದು ವಾಸಿಸಬಹುದಾದರೆ ಈ ದೇಶ ಉಳಿಯುತ್ತಾ? ಭಾರತದಲ್ಲಿ ಹುಟ್ಟಿದ ಯಾರನ್ನೂ ಆಚೆಗೆ ಹಾಕುವುದಿಲ್ಲ. ಯಾರೂ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ನಮ್ಮ ದೇಶದ ನಾಗರೀಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಸುಳ್ಳು ವದಂತಿಗಳಿಗೆ ಕಿವಿಗೊಡದೆ ಜನರು ಶಾಂತಿಯಿಂದ ಇರಬೇಕು ಎಂದು ಹೇಳಿದರು.










