ಮಹಾರಾಷ್ಟ್ರ : ಪ್ರೀತಿ ನಿರಾಕರಿಸಿದ್ದಕ್ಕೆ ವ್ಯಕ್ತಿಯೋರ್ವ ಉಪನ್ಯಾಸಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ವರ್ಧಾ ಜಿಲ್ಲೆಯಲ್ಲಿ ನಡೆದಿದೆ. ಅಂಕಿತಾ ಪಿಸುದೆ(24) ಹತ್ಯೆಯಾದ ಉಪನ್ಯಾಸಕಿ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ವಿಕೇಶ್ ನಾಗರಾಲೆ(27) ಎಂದು ಗುರುತಿಸಲಾಗಿದೆ. ಆರೋಪಿ ಫೆ. 3ರಂದು ಉಪನ್ಯಾಸಕಿ ಅಂಕಿತಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಕೂಡಲೇ ಅಂಕಿತಾ ಅವರನ್ನು ನಾಗಾಪುರದ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶೇ.40 ರಷ್ಟು ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಉಪನ್ಯಾಸಕಿ ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ 7ಗಂಟೆಗೆ ಮೃತ ಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದ್ದು, ಆರೋಪಿ ವಿಕೇಶ್‍ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಆರೋಪಿ ವಿಕೇಶ್ ಅವರಿಗೆ ಈಗಾಗಲೇ ವಿವಾಹವಾಗಿ ಒಂದು ಮಗು ಕೂಡಾ ಇದ್ದು, ವಿವಾಹವಾಗಿದ್ದರೂ ಅಂಕಿತಾ ಅವರಿಗೆ ತನನ್ನು ಮದುವೆ ಆಗುವಂತೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.










