ಮೂಡಿಗೆರೆ:ಬೆಳೆಗಾರರ ಸಂಕಷ್ಟಕ್ಕೆ ಬಾರದ ಕಾಫಿ ಮಂಡಳಿ : ರೈತ ಸಂಘದಿಂದ ಆರೋಪ.

ಮೂಡಿಗೆರೆ : ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಕಾಫಿ ಮಂಡಳಿ ಕಾಫಿ ಬೆಳೆಗಾರರ ಸಂಪರ್ಕಕ್ಕೆ ಸಿಗದೆ ಸತಾಯಿಸುತ್ತಿದ್ದಾರೆ. ಕಷ್ಟದಲ್ಲಿರುವ ಬೆಳೆಗಾರನ ನೆರವಿಗೆ ಧಾವಿಸುತ್ತಿಲ್ಲ. ಪಟ್ಟಣದಲ್ಲಿರುವ ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿಗಳ ಕಛೇರಿಯೂ ಕೂಡ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಾಲ್ಲೂಕು ರೈತ ಸಂಘದ ಮಾಜಿ ಕಾರ್ಯದರ್ಶಿ ಡಿ.ಎಸ್.ರಮೇಶ್ ಗೌಡ ಅವರು ಆರೋಪಿಸಿದ್ದಾರೆ.
    ಕೆಲವು ವರ್ಷಗಳ ಹಿಂದೆ ಕಾಫಿ ಬೆಳೆಗಾರರಿಗೆ ದಾಸ್ತಾನು ಕೊಠಡಿ, ಸಿಮೆಂಟ್ ಖಣ, ಸ್ಪಿಂಕ್ಲರ್ ಸೆಟ್ ಸಹಾಯಧನ, ಪಲ್ಪರ್ ಯಂತ್ರ, ಕಾಫಿ ಸಂಸ್ಕರಣ ಯಂತ್ರ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ನೀಡಲಾಗಿತ್ತು. ಆದರೆ ಪ್ರಸಕ್ತ ಎರಡು ರಿಂಗ್ ಬಾವಿ ಹಾಗೂ ಒಂದು ಕೆರೆ ನಿರ್ಮಾಣಕ್ಕೆ ಮಾತ್ರ ಅನುದಾನ ನೀಡಲಾಗುತ್ತಿದೆ. ಕೇವಲ ಈ ಎರಡು ಅನುದಾನದಿಂದ ಬೆಳೆಗಾರರು ಯಾವ ರೀತಿಯಲ್ಲಿ ತೊಟಗಳನ್ನು ನಿರ್ವಹಣೆ ಮಾಡಲು ಅಸಾಧ್ಯ. ಇನ್ನೊಂದು ಕಡೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅವೈಜಾÐನಿಕ ನಿರ್ಧಾರಗಳಿಂದಾಗಿ ರೈತರು ಜೀವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಕೃಷಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದರು ದೂರಿದ್ದಾರೆ.
    ಇದರ ಜೊತೆಗೆ 5 ವರ್ಷಗಳಿಂದ ಬೆಳೆಗಾರರಿಗೆ ಸಹಾಯಧನ ನೀಡಲಾಗಿಲ್ಲ. ಈ ಬಾರಿಯ ಅತೀವೃಷ್ಟಿಯಿಂದಾಗಿ ಮಲೆನಾಡು ಭಾಗದ ರೈತರು ಜೀವನ ನಡೆಸುವುದೇ ಕಷ್ಟಕರವಾಗಿರುವಾಗ ಮತ್ತಷ್ಟು ಕಷ್ಟ ನೀಡುವುದು ಸರಿಯಲ್ಲ. ಸರ್ಕಾರದಿಂದ ಪ್ರತೀ ವರ್ಷದ ಏಪ್ರಿಲ್ ತಿಂಗಳಿನಿಂದ ಮಂಡಳಿಗೆ ಹೊಸ ಹೊಸ ಯೋಜನೆಗಳ ರೂಪು ರೇಷೆಯ ಬೈಲಾವನ್ನು ನೀಡಲಾಗುತ್ತದೆ. ಆದರೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದೆ ರೈತರನ್ನು ವಂಚಿಸುತ್ತಿದ್ದಾರೆ. ಸಂಸದರು ಹಾಗೂ ಶಾಸಕರು ರೈತರ ಕಷ್ಟಗಳನ್ನು ಅರಿತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹಾಕಿ ಮಲೆನಾಡು ಭಾಗದ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
   ಪತ್ರಿಕಾ ಹೇಳಿಕೆಯಲ್ಲಿ ಕೊನೆಯದಾಗಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಫಸಲ್ ಭೀಮ್ ಯೋಜನೆಯ ವಿಮಾ ವ್ಯಾಪ್ತಿಗೆ ಕಾಫಿ ಬೆಳೆಗಾರರನ್ನು ಸೇರಿಸಬೇಕು. ಕಾಫಿ ಬೆಳೆಯನ್ನು ವಾಣಿಜ್ಯ ಬೆಳೆ ಎಂದು ಬಿಂಬಿಸಿ ಕಾಫಿ ಬೆಳೆಗಾರರನ್ನು ವಿಮೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಕಾಫಿ ವಾಣಿಜ್ಯ ಬೆಳೆಯಾದರೂ ಆದರೂ ಇದರಲ್ಲಿ ಜೀವನ ಕಂಡು ಕೊಂಡ ಬಹುತೇಕ ರೈತರು ಚಿಕ್ಕ ಹಿಡುವಳಿದಾರರು. ಆದುದರಿಂದ ಈ ವಿಚಾರದಲ್ಲಿ ಪುನರ್ ಪರಿಶೀಲನೆ ಅಗತ್ಯ. ಇದರ ಜೊತೆಗೆ ಕಾಫಿ ಮಂಡಳಿಯನ್ನು ಪುನಶ್ಚೇತನಗೊಳಿಸಿ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಬೇಕು ಎಂದು ಅವರು ಹೇಳಿದರು.