ಚಾಮರಾಜನಗರ : ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಲೆ ಮಹಾದೇಶ್ವರ ಸ್ವಾಮಿ ಭಕ್ತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ರ್ಯಾಪರ್ ಚಂದನ್ ಶೆಟ್ಟಿ ಅವರು ಆಗಸ್ಟ್ 23ರಂದು “ಕೋಲು ಮಂಡೆ ಜಂಗಮ ದೇವರು” ಎಂಬ ತಮ್ಮ ಹೊಸ ರ್ಯಾಪ್ ಹಾಡನ್ನು ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದರು. ಈ ವೀಡಿಯೋ ನೋಡಿ ಮಲೆ ಮಹಾದೇಶ್ವರ ಭಕ್ತರು ಚಂದನ್ ಶೆಟ್ಟಿ ಅವರ ಮೇಲೆ ಮಾದಪ್ಪನ ಹಾಡನ್ನು ಅಶ್ಲೀಲವಾಗಿ ತೋರಿಸಿದ್ದಾರೆ ಎಂದು ಆರೋಪಿಸಿದ್ದು, ಶಿವರಣೆ ಸಂಕಮ್ಮ ಅವರ ಸಾಲನ್ನು ಅಶ್ಲೀಲವಾಗಿ ಪ್ರದರ್ಶಿಸಲಾಗಿದೆ. ಇದರಿಂದ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಕೂಡಾ ಚಂದನ್ ಶೆಟ್ಟಿ ಅವರು ಯುವ ದಸರಾ ವೇದಿಕೆಯಲ್ಲಿ ನಿವೇದಿತಾ ಗೌಡ ಅವರಿಗೆ ಪ್ರೇಮ ನಿವೇದನೆ ಮಾಡುವ ಮೂಲಕ ವಿವಾದಕ್ಕೆ ಸಿಲುಕಿದ್ದರು. ಇದೀಗ ಮತ್ತೆ ಇಂತಹದ್ದೊಂದು ರ್ಯಾಪ್ ಹಾಡು ಹಾಡುವ ಮೂಲಕ ಮಾದಪ್ಪನ ಭಕ್ತರ ಕೆಂಗೆಣ್ಣಿಗೆ ಗುರಿಯಾಗಿದ್ದು, ಕೂಡಲೇ ಯೂಟ್ಯೂಬ್‍ನಿಂದ ಹಾಡನ್ನು ಡಿಲೀಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.










