ಮೂಡಿಗೆರೆ : ನೂರಮೂರು ವರ್ಷಗಳ ಹಿಂದೆ ಲಯನ್ಸ್ ಸಂಸ್ಥೆ ಸಾರ್ವಜನಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಮೂಲಕ ಪ್ರಾರಂಭವಾಗಿದ್ದು, ಇಂದಿಗೂ ಅದು ಸಾರ್ವಜನಿಕರ ಸೇವೆಯಲ್ಲಿ ತೊಡಗುವುದರ ಮೂಲಕ ತನ್ನ ದಿಟ್ಟಹೆಜ್ಜೆಯನ್ನು ಇಡುತ್ತಿದ್ದು, ಮೂಡಿಗೆರೆ ಲಯನ್ಸ್ ಸಂಸ್ಥೆ 43 ವರ್ಷವನ್ನು ಪೂರೈಸುವುದರ ಮೂಲಕ 44 ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಎಂ.ಜೆ.ಎಫ್ ಡಾ|| ಗೀತಪ್ರಕಾಶ್ ತಿಳಿಸಿದರು.
ಪಟ್ಟಣದ ಜೇಸಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 43 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು. ಲಯನ್ಸ್ ಸಂಸ್ಥೆಯಲ್ಲಿ ಈಗಾಗಲೇ 43 ಅಧ್ಯಕ್ಷರು ಮತ್ತು ಸದಸ್ಯರುಗಳು ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆರೋಗ್ಯ ತಪಾಸಣಾ ಶಿಬಿರ, ಸರ್ಕಾರಿ ಶಾಲೆಗಳಿಗೆ ಅಗತ್ಯ ವಸ್ತುಗಳ ಪೂರೈಕೆ, ಎಲಮಾರೆಯ ಕಾಯಿಯಂತೆ ದುಡಿಯುತ್ತಿರುವವರನ್ನು ಗುರುತಿಸಿ ಗೌರವಿಸುವುದರ ಮೂಲಕ ಹಾಗೂ ಕೊರೋನಾ ವಾರಿಯರ್ಸ್‍ಗಳನ್ನು ಗುರುತಿಸಿ ಗೌರವಿಸಿ ಸಂಸ್ಥೆಯ ಘನತೆಯನ್ನು ಹೆಚ್ಚಿಸಿದೆ ಎಂದರು.
ಲಯನ್ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಗೋಪಾಲಗೌಡ ಅವರು ಮಾತನಾಡಿ, 2020 ರ ಸೋಮವಾರದಂದು ತಾಲ್ಲೂಕಿನ ಗೋಣಿಬೀಡಿನಲ್ಲಿ ನನ್ನ ತಾಯಿಯವರ ನೆನಪಿಗಾಗಿ ಲಯನ್ ಸಂಸ್ಥೆ ಗೋಣಿಬೀಡು ಮಾತೃಶ್ರೀ ಎಂಬ ಹೆಸರಿನಲ್ಲಿ ಪ್ರಾರಂಭ ಮಾಡಿದ್ದು, ತಾಲ್ಲೂಕು ಮಟ್ಟದಿಂದ ಹೋಬಳಿ ಮಟ್ಟಕ್ಕೆ ಪಾದರ್ಪಣೆ ಮಾಡುವುದರ ಮೂಲಕ ಲಯನ್ಸ್ ಜಿಲ್ಲೆಯ ನೂರಒಂದನೆ ಸಂಸ್ಥೆಯಾಗಿದೆ. ಸಂಸ್ಥಾಪಕಾಧ್ಯಕ್ಷರಾಗಿ ಆರ್.ಶಿವಕುಮಾರ್ ಆಯ್ಕೆಯಾಗಿದ್ದು, ಅವರು ತಮ್ಮ ತಂಡದ ಜೊತೆಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು. ಮೂಡಿಗೆರೆ ಲಯನ್ಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಸದಸ್ಯರುಗಳೆಲ್ಲರೂ ಕೈಜೋಡಿಸಿದ್ದರ ಕಾರಣ ಗೋಣಿಬೀಡು ಹೋಬಳಿಯಲ್ಲಿ ಸಂಸ್ಥೆ ಪ್ರಾರಂಭಕ್ಕೆ ಸಾಧ್ಯವಾಯಿತು ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಹಿರಿಯ ಸದಸ್ಯ ಎಂ.ಜೆ.ತಮ್ಮಣ್ಣ (ಕೃಷ್ಣೇ)ಗೌಡ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಡಾ|| ಗಾಯತ್ರಿ ಗೀತಪ್ರಕಾಶ್ ನೆರವೇರಿಸಿದರು. ಮಾಜಿ ಜಿಲ್ಲಾ ರಾಜ್ಯಪಾಲ ಎನ್.ಎಲ್.ಸುಂದರೇಶ್ವರ್, ಪ್ರಾಂತೀಯ ಅಧ್ಯಕ್ಷ ಡಾ|| ರಾಜೇಶ್ ಹೆಗ್ಡೆ, ಜಿಲ್ಲಾ ಸಂಯೋಜಕ ಸಾಹಿತಿ ಹಳೇಕೋಟೆ ರಮೇಶ್ ಹೆಚ್.ಎನ್., ವಿಸ್ತರಣ ಘಟಕದ ಅಧ್ಯಕ್ಷ ಎಂ.ಎನ್.ಅಶ್ವತ್, ಸಂಜೀವ ಶಣ್ಯ, ವಸಂತಕುಮಾರ್ ಶೆಟ್ಟಿ, ಭಾರತಿ,ಪಿಆರ್‍ಒ ಮಂಜೇಶ್ ಭಟ್, ಕಾರ್ಯದರ್ಶಿ ಕೆ.ಟಿ.ದೇವಪ್ಪ, ಖಜಾಂಚಿ ಯು.ಇ.ಪ್ರಭಾಕರ್ ವೇದಿಕೆಯಲ್ಲಿ ಇದ್ದರು.










