ಫ್ರಿಡ್ಜ್, ಟಿವಿ, ಬೈಕ್ ಇದ್ರೆ ಪಡಿತರ ಚೀಟಿ ರದ್ದು- ಸಚಿವ ಉಮೇಶ್ ಕತ್ತಿ.

129
First Suddi

ಬೆಳಗಾವಿ : ಯಾರ ಬಳಿ ಟಿವಿ, ಫ್ರಿಡ್ಜ್ ಹಾಗೂ ಬೈಕ್ ಇರುತ್ತದೆಯೋ ಅಂಥವರ ಬಿಪಿಎಲ್ ಕಾರ್ಡ್‍ನ್ನು ರದ್ದು ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಅವರು ತಿಳಿಸಿದರು.

 ಮಾಧ್ಯಮದವರೊಂದಿಗೆ ಮಾತನಾಡಿದ ಉಮೇಶ್ ಕತ್ತಿ ಅವರು 5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು ಹಾಗೂ ಮನೆಯಲ್ಲಿ ಬೈಕ್, ಟಿವಿ ಮತ್ತು ಫ್ರಿಡ್ಜ್ ಹೊಂದಿರುವವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು. ಇಂತಹ ಬಿಪಿಎಲ್ ಕಾರ್ಡುದಾರರು ತಮ್ಮ ಕಾರ್ಡ್‌ಗಳನ್ನು ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೂ ಗಡುವು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೇ ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳು ಹಾಗೂ ವರ್ಷಕ್ಕೆ 1 ಲಕ್ಷ 25 ಸಾವಿರಕ್ಕಿಂತ ಅಧಿಕ ಆದಾಯ ಹೊಂದಿರುವವರು ಸಹ ಬಿಪಿಎಲ್ ಕಾರ್ಡ್ ಹೊಂದಿರುವಂತಿಲ್ಲ. ಅವುಗಳನ್ನು ಮಾರ್ಚ್ 31ರ ಒಳಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ಸರ್ಕಾರವೇ ಸಮೀಕ್ಷೆ ನಡೆಸಿ ಕಾರ್ಡುಗಳನ್ನು ಹಿಂಪಡೆಯುತ್ತದೆ. ಒಂದು ವೇಳೆ ಈ ಎಲ್ಲ ಸೌಲಭ್ಯಗಳು ಇದ್ದೂ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತಹವರಿಗೆ ದಂಡದ ಜತೆಗೆ ಶಿಕ್ಷೆ ಸಹ ನೀಡಲಾಗುತ್ತದೆ ಎಂದು ಉಮೇಶ್ ಕತ್ತಿ ಅವರು ಎಚ್ಚರಿಕೆ ನೀಡಿದ್ದಾರೆ.

ಅಕ್ಕಿ ಜೊತೆ ರಾಗಿ ಮತ್ತು ಜೋಳ ವಿತರಣೆ
ಏಪ್ರಿಲ್ 1 ರಿಂದ 15 ಜಿಲ್ಲೆಗಳಿಗೆ ಜೋಳ, 15 ಜಿಲ್ಲೆಗಳಿಗೆ ರಾಗಿ ವಿತರಣೆಗೆ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಬಿಪಿಎಲ್ ಕಾರ್ಡುದಾರರಿಗೆ ಏಪ್ರಿಲ್ 1ರಿಂದ ಎರಡು ಕೆಜಿ ಅಕ್ಕಿ ಜೊತೆಗೆ ಮೂರು ಕೆಜಿ ಜೋಳವನ್ನು ಉತ್ತರ ಕರ್ನಾಟಕದದ 15 ಜಿಲ್ಲೆಗಳಿಗೆ ನೀಡಿದರೆ, ದಕ್ಷಿಣದ 15 ಜಿಲ್ಲೆಗಳಿಗೆ ಎರಡು ಕೆಜಿ ಅಕ್ಕಿಯೊಂದಿಗೆ ಮೂರು ಕೆಜಿ ರಾಗಿಯನ್ನು ವಿತರಿಸಲಾಗುವುದು ಎಂದು ಉಮೇಶ್ ಕತ್ತಿ ಅವರು ತಿಳಿಸಿದ್ದಾರೆ.