ಮರಕ್ಕೆ ಕಾರು ಡಿಕ್ಕಿ ; ಸ್ಥಳದಲ್ಲೇ ಸಿಆರ್ ಪಿಎಫ್ ಯೋಧ ಸಾವು…

87
firstsuddi

ಮೈಸೂರು : ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಿಆರ್ ಪಿಎಫ್ ಯೋಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು-ಬಂಟ್ವಾಳ ಹೆದ್ದಾರಿಯ ಹುಣಸೂರು ತಾಲ್ಲೂಕಿನ ಅರಸುಕಲ್ಲಹಳ್ಳಿ ಬಳಿ ಗುರುವಾರ ರಾತ್ರಿ ನಡೆದಿದ್ದು, ಘಟನೆಯಲ್ಲಿ 35 ವರ್ಷದ ಅಣ್ಣಯ್ಯ ಶೆಟ್ಟಿ ಮೃತಪಟ್ಟಿದ್ದಾರೆ.

ಅಣ್ಣಯ್ಯ ಶೆಟ್ಟಿ ಮೂಲತಃ ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಗೊರಳ್ಳಿಯವರಾಗಿದ್ದು, ಪ್ರಸ್ತುತ ಮಹರಾಷ್ಟ್ರದ ನಕ್ಸಲ್ ಏರಿಯಾದ ಗಡ್ಸರ್ ನಲ್ಲಿ 14 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಎರಡು ದಿನಗಳ ಹಿಂದೆಯಷ್ಟೆ ರಜೆ ಮೇಲೆ ಊರಿಗೆ ಬಂದಿದ್ದ ಇವರು ಜಿಲ್ಲೆಯಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಗುರುವಾರ ರಾತ್ರಿ ಊರಿಗೆ ತೆರಳುತ್ತಿದ್ದ ವೇಳೆ, ತಾಲ್ಲೂಕಿನ ಕಲ್ಲಹಳ್ಳಿ ಗೇಟ್ ನ ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅಣ್ಣಯ್ಯ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣಾ ಪೊಲೀಸರು ಮೃತದೇಹವನ್ನು ಹೊರ ತೆಗೆದು, ಹುಣಸೂರು ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ನಿನ್ನೆ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಗೊರಳ್ಳಿಯಲ್ಲಿ ಸಕಾಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.