ಕೊಟ್ಟಿಗೆಹಾರ : ಬಣಕಲ್ ಸಮೀಪದ ಸಬ್ಲಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಅರಣ್ಯ ಸಿಬ್ಬಂದಿ ಎಷ್ಟೇ ಕಾರ್ಯಾಚರಣೆ ನಡೆಸಿ ಪಟಾಕಿ ಸಿಡಿಸಿ ಓಡಿಸಲು ಯತ್ನಿಸಿದರೂ ಕಾಡಾನೆಗಳು ಕಾಡಿಗೂ ಹೋಗದೇ ಊರು ಬಿಡದಂತಾಗಿವೆ.
ಸಬ್ಲಿಯಿಂದ ಹಳ್ಳಿಕೆರೆ ಮಾರ್ಗವಾಗಿ ಅತ್ತಿಗೆರೆ ಕಂಬಳಕಾಡು ತೋಟದಲ್ಲಿ ಬೀಡು ಬಿಟ್ಟಿವೆ. ಅರಣ್ಯ ಸಿಬ್ಬಂದಿ ಕೂಬಿಂಗ್ ನಡೆಸಿದರೂ ಒಂದೆಡೆಯಿಂದ ಮತ್ತೇ ಅದೇ ಸ್ಥಳಗಳಿಗೆ ಬಂದು ಬೀಡು ಬೀಡುತ್ತಿವೆ. ಇದರಿಂದ ಜನರು ಭಯಬೀತರಾಗಿದ್ದು ಕಾಫಿ ತೋಟಗಳು ಸಂಪೂರ್ಣ ಹಾನಿಯಾಗಿವೆ.
ಅರಣ್ಯ ಉಪವಲಯ ಅಧಿಕಾರಿ ಉಮೇಶ್ ಅವರ ತಂಡ ನಿನ್ನೆಯೂ ಕಾಡಾನೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ರಾತ್ರಿವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಅತಿಯಾದ ಮಳೆ ಸುರಿಯುತ್ತಿರುವುದರಿಂದ ಕಾಡಾನೆಗಳು ಕೂಡ ಊರು ಬಿಟ್ಟು ಅಲುಗಾಡದೇ ಹಳ್ಳಿಕೆರೆ ಸಬ್ಲಿ ಗ್ರಾಮದಲ್ಲೇ ಬೀಡು ಬಿಟ್ಟಿವೆ ಎಂದು ಅವರು ಪ್ರಜಾವಾಣಿಗೆ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ನಾಗರಾಜ್, ಎಚ್.ಎಂ.ರಮೇಶ್, ಚಾಲಕ ಸುಮಂತ್,ಸಿಬ್ಬಂದಿ ಕೃಷ್ಣಮೂರ್ತಿ,ಮುರಳಿ ಇದ್ದರು.










