ಬೆಂಗಳೂರು : ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಸಿ.ಎಂ. ಉದಾಸಿ(85) ನಿಧನರಾಗಿದ್ದಾರೆ. ರಕ್ತಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಹಲವು ದಿನಗಳ ಹಿಂದೆ ನಗರದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಹಾನಗಲ್ ನಲ್ಲಿ ನಾಳೆ ಉದಾಸಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಉದಾಸಿ ಪುತ್ರ ಶಿವಕುಮಾರ್ ಉದಾಸಿ ತಿಳಿಸಿದ್ದಾರೆ.
ಹಾನಗಲ್ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಜನತಾ ಪರಿವಾರದಿಂದ ರಾಜಕೀಯಕ್ಕೆ ಬಂದ ಅವರು, ಬಳಿಕ ಬಿಜೆಪಿಗೆ ಬಂದಿದ್ದರು. ಆ ನಂತರ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರ ಜತೆ ಕೆಜೆಪಿಗೆ ಹೋಗಿ ಹಾನಗಲ್ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. 2018 ರಲ್ಲಿ ಬಿಜೆಪಿಯಿಂದ ಅದೇ ಕ್ಷೇತ್ರದಿಂದ ಗೆಲುವು ಸಾಧಿಸಿ ಶಾಸಕರಾಗಿದ್ದರು.
ಹಿರಿಯ ಶಾಸಕ ಸಿ.ಎಂ.ಉದಾಸಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದು, ಸಿ.ಎಂ ಉದಾಸಿಯವರು ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿ. ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ಆ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಭಗವಂತ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.










