ಮುಂಬೈ : ಐಟಿ ದಾಳಿ ಬಳಿಕ ಬಾಲಿವುಡ್ ನಟ ಸೋನು ಸೂದ್ ಅವರು ಕೊನೆಗೂ ಮೌನ ಮುರಿದಿದ್ದಾರೆ.
ಕಳೆದ ವಾರ ಮುಂಬೈನಲ್ಲಿರುವ ಸೋನು ಸೂದ್ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ನಟ 20 ಕೋಟಿ ರೂ. ಆದಾಯ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಮಾಹಿತಿ ನೀಡಿದ್ದರು.
ಈ ಕುರಿತಂತೆ ಸೋನು ಸೂದ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದು, ನಿಮ್ಮ ಕಥೆಯನ್ನು ನೀವು ಯಾವಾಗಲೂ ಹೇಳಬೇಕಾಗಿಲ್ಲ. ಅದಕ್ಕೆ ಸಮಯ ಬರುತ್ತದೆ. ‘ಈ ದೇಶದ ಜನರ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಫೌಂಡೇಷನ್ ನಲ್ಲಿ ಇರುವ ಒಂದೊಂದು ರೂಪಾಯಿ ಕೂಡ ಅಗತ್ಯ ಇರುವವರಿಗೆ ಸಹಾಯ ಮಾಡಲು ಮತ್ತು ಜನರ ಜೀವ ಉಳಿಸಲು ಕಾದಿದೆ.
ಜಾಹೀರಾತಿನಿಂದ ನನಗೆ ಬರುವ ಸಂಭಾವನೆಯನ್ನು ನೇರವಾಗಿ ಮಾನವೀಯ ಕೆಲಸಗಳಿಗೆ ನೀಡಿ ಎಂದು ಕೂಡ ನಾನು ಪ್ರೋತ್ಸಾಹಿಸಿದ್ದೇನೆ. ಆ ಕೆಲಸವೂ ಸಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಕೆಲವು ಅತಿಥಿಗಳನ್ನು ಬರಮಾಡಿಕೊಳ್ಳುತ್ತ ಇದ್ದೆ. ಹಾಗಾಗಿ ನಿಮ್ಮ ಕರೆಗಳಿಗೆ ಉತ್ತರಿಸಲು ಆಗಲಿಲ್ಲ. ಈಗ ನಿಮ್ಮ ಸೇವೆಗಾಗಿ ಮರಳಿದ್ದೇನೆ ಎಂದು ಸೋನು ಸೂದ್ ಬರೆದುಕೊಂಡಿದ್ದಾರೆ.










