ರೈತರ ಹಿತದೃಷ್ಟಿಯಿಂದ ಕಾಯ್ದೆ ವಾಪಸ್ ಪಡೆದಿರೋದು ಸ್ವಾಗತಾರ್ಹ : ಬಿ.ಎಸ್.ಯಡಿಯೂರಪ್ಪ.

68
firstsuddi

ಬಾಗಲಕೋಟೆ : ಯಾವುದೇ ಒಣ ಪ್ರತಿಷ್ಟೆಗೆ ಒಳಗಾಗದೇ ಮೋದಿಯವ್ರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ. ರೈತರ ಹಿತದೃಷ್ಟಿಯಿಂದ ಕಾಯ್ದೆ ವಾಪಸ್ ಪಡೆದಿರೋದು ಸ್ವಾಗತಾರ್ಹ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಹಿಂಪಡೆಯುವ ಮೂಲಕ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸ್ವಲ್ಪ ತಡವಾದರೂ ಈ ದೃಢ ನಿರ್ಧಾರ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆಯಾಗಿದೆ. ಇದರಿಂದ ರೈತ ಸಮೂಹಕ್ಕೆ ಒಳ್ಳೆಯದಾಗುತ್ತದೆ. ಈ ಕಾಯ್ದೆ ವಾಪಸ್ ಪಡೆಯೋದು ಸಾಧ್ಯವೇ ಇಲ್ಲ ಎಂದು ಹಿಂದೆ ಹೇಳಿದ್ರು. ರೈತರ ಹೋರಾಟ ನೋಡಿದ ಮೇಲೆ, ರೈತರ ಹಿತದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ದೇಶದ ರೈತರಲ್ಲಿ ಪ್ರಧಾನಿ ಬಗ್ಗೆ ಗೌರವ, ವಿಶ್ವಾಸ ಜಾಸ್ತಿಯಾಗಿದೆ ಎಂದರು.

ರೈತ ಹೋರಾಟದಲ್ಲಿ ಎಷ್ಟೋ ಜನರು ಪ್ರಾಣ ಕಳೆದುಕೊಂಡ ವಿಚಾರವಾಗಿ ಮಾತನಾಡಿದ ಅವರು, ಪ್ರಾಣ ಕಳೆದುಕೊಂಡಿದ್ದಕ್ಕೆ ಬೇರೆ ಬೇರೆ ಕಾರಣಗಳಿವೆ. ಆ ಸಂದರ್ಭದಲ್ಲಿ ನಡೆದ ಘಟನಾವಳಿಗಳು ನಿಮಗೂ ಗೊತ್ತು, ನಮಗೂ ಗೊತ್ತು. ಕಾರಣ ಏನು ಅನ್ನೋದನ್ನು ಈಗ ನಿಮಗೆ ಹೇಳೋ ಅಗತ್ಯ ಇಲ್ಲ ಎಂದರು.

ಮುಂದಿನ ಚುನಾವಣೆ ಹಾಗೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲು ಹಿನ್ನೆಲೆ ಕೃಷಿ ಕಾಯ್ದೆ ಹಿಂಪಡೆಯಲಾಗಿದೆ ಎನ್ನುವ ವಿಚಾರವನ್ನು ಅಲ್ಲಗಳೆದ ಯಡಿಯೂರಪ್ಪ ಅವರು, ಇನ್ನೂ 20 ವರ್ಷವಾದರೂ ಬಿಜೆಪಿ ಬಿಟ್ಟು ಯಾರು ಗೆಲ್ಲೋದಕ್ಕೆ ಆಗೋಲ್ಲ. ನರೇಂದ್ರ ಮೋದಿಯವರನ್ನು ವಿಶ್ವದ ನಾಯಕರೇ ಕೊಂಡಾಡುತ್ತಿದ್ದಾರೆ. ನರೇಂದ್ರ ಮೋದಿ ಹೆಸರೇ ಸಾಕು, ಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲಿದೆ. ಎಂಬ ವಿಶ್ವಾಸವನ್ನು ಮಾಜಿ ಸಿಎಂ ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.