ಚಿಕ್ಕಮಗಳೂರು : ಅಕಾಲಿಕ ಮಳೆಯಿಂದ ಹಾನಿಗೊಳಗಾಗಿರುವ ತಾಲ್ಲೂಕಿನ ಆವತಿ ಹೋಬಳಿಯ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಪವಿಭಾಗಾಧಿಕಾರಿ, ತಹಶೀಲ್ದಾರ್, ಕಾಫಿಮಂಡಳಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಆವತಿ, ಬೈಗೂರು, ಕೆರೆಮಕ್ಕಿ ತಳಿಹಳ್ಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿನೀಡಿ ಸತತ ಮಳೆಯಿಂದಾಗಿರುವ ಬೆಳೆಹಾನಿಯನ್ನು ಖುದ್ದು ವೀಕ್ಷಿಸಿದರು.
ಬೈಗೂರಿನ ಜಾರ್ಜ್ ಬೆನ್ಸಿಸ್, ಕೆರೆಮಕ್ಕಿ ಮಹೇಶ್, ಕೆ.ಎಂ.ಶಾಂತೇಗೌಡ, ಕೆ.ಪಿ.ಚಂದ್ರೇ ಗೌಡ, ಎಚ್.ಬಿ.ಮಹೇಂದ್ರ ಅಗಳುಗುಂಡಿಯ ಉದಯ್ ಮಲ್ಲಂದೂರಿನ ಉತ್ತಮ್ ಗೌಡ ಅವರ ತೋಟಗಳನ್ನು ಅಧಿಕಾರಿಗಳ ತಂಡ ವೀಕ್ಷಿಸಿತು.
ಈ ವೇಳೆ ಸತತ ಮಳೆಯಿಂದಾಗಿ ಕಾಳುಮೆಣಸು, ಕಾಫಿಹಣ್ಣು ಮತ್ತು ಅಡಿಕೆ ಬೆಳೆ ಉದುರಿ ಮಣ್ಣು ಪಾಲಾಗಿರುವುದು ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನೆಲಕಚ್ಚಿರುವುದು ಕಂಡು ಬಂತು.
ಸತತ ಮಳೆಯಿಂದಾಗಿರುವ ಬೆಳೆನಷ್ಟ ಮತ್ತು ಉಂಟಾಗಿರುವ ಸಮಸ್ಯೆಗಳನ್ನು ಈ ವೇಳೆ ಜಿಲ್ಲಾಧಿಕಾರಿಗಳಿಗೆ ವಿವರಿಸಿದ ಕಾಫಿಬೆಳೆಗಾರರು ವಿಶೇಷ ಅನುದಾನದಡಿ ಆರ್ಥಿಕ ಪ್ಯಾಕೇಜ್ ಒದಗಿಸಿಕೊಡುವಂತೆ ಮನವಿ ಮಾಡಿದರು.
ಇದೇ ವೇಳೆ ಮಾದ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಬೆಳೆನಷ್ಟದ ಸಮೀಕ್ಷೆಗಾಗಿ ಕಾಫಿಮಂಡಳಿ, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಜಿಲ್ಲಾದ್ಯಂತ ಸಮೀಕ್ಷೆ ನಡೆಸಿ 10 ದಿನಗಳ ಒಳಗೆ ತಮಗೆ ವರದಿ ನೀಡಲಿವೆ ಎಂದು ತಿಳಿಸಿದರು.
ಅಧಿಕಾರಿಗಳ ತಂಡ ನೀಡಿದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದರ ಜೊತೆಗೆ ಜಿಲ್ಲೆಯ ಬೆಳೆಗಾರರು ಮತ್ತು ರೈತರ ಪರಿಸ್ಥಿತಿ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಗುವುದು. ಜಿಲ್ಲೆಯಲ್ಲಿ ಆಗಿರುವ ಶೇ.33 ಕ್ಕಿಂತ ಹೆಚ್ಚುನಷ್ಟ ಹಾಗೂ ಶೇ.33ಕ್ಕಿಂತ ಕಡಿಮೆಯಾಗಿರುವ ನಷ್ಟದ ವರದಿಯನ್ನೂ ಸಲ್ಲಿಸಲಾಗುವುದು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಡಾ|ಎಚ್.ಎಲ್.ನಾಗರಾಜ್, ತಹಶೀಲ್ದಾರ್ ಡಾ|ಕೆ.ಜೆ.ಕಾಂತ ರಾಜ್, ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ವೇದಮೂರ್ತಿ, ಕಾಫಿಮಂಡಳಿ ಉಪನಿರ್ದೇಶಕ ಶ್ರೀನಿವಾಸ್ ಜಿಲ್ಲಾಧಿಕಾರಿಗಳ ಜೊತೆಗಿದ್ದರು.
ಆವತಿ ಹೋಬಳಿ ಕಾಫಿಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಎನ್.ಶ್ರೀಧರ್, ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್, ಎಪಿಎಂಸಿ ಸದಸ್ಯ ಎಚ್.ಬಿ.ಮಹೇಂದ್ರ, ಬ್ಯಾರವಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಎಂ.ಜೆ.ಸಂದೀಪ್, ಮಲ್ಲಂದೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ.ಧರ್ಮೇಶ್, ಬೆಳೆಗಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಉತ್ತಮ್, ಹುಲಿಕೆರೆ, ವಸ್ತಾರೆ ಸಂಘದ ಕಾರ್ಯದರ್ಶಿ ಕೆ.ಯು.ರತೀಶ್ ಕುಮಾರ್ ಹಾಜರಿದ್ದರು.










