ಬೆಂಗಳೂರು : ವಿಧಾನ ಪರಿಷತ್ ಕಲಾಪದ ಸದನದಲ್ಲಿ ಸಚಿವರ ಗೈರಿಗೆ ಸಭಾಪತಿ ಬಸವರಾಜ ಹೊರಟ್ಟಿ ಫುಲ್ ಗರಂ ಆದರು.
ವಿಧಾನ ಪರಿಷತ್ ಕಲಾಪದಲ್ಲಿ ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ಶೂನ್ಯವೇಳೆ ಕೈಗೆತ್ತಿಕೊಳ್ಳುವ ಮುನ್ನ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವ ಸಚಿವರ ಹೆಸರನ್ನು ಸಭಾಪತಿಗಳು ಕರೆದರು. ಆದರೆ, ಸಚಿವರಾದ ಅಶ್ವತ್ಥನಾರಾಯಣ, ಸುಧಾಕರ್, ನಾಗೇಶ್, ಸುನೀಲ್ ಕುಮಾರ್ ಗೈರಾಗಿದ್ದರು. ಕೇವಲ ಓರ್ವ ಸಚಿವರು ಮಾತ್ರ ಹಾಜರಿದ್ದರು.
ಸಚಿವರ ಗೈರಿಗೆ ಸಭಾಪತಿ ಗರಂ ಆದಾಗ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಶೂನ್ಯವೇಳೆ ಆರಂಭಿಸಿ 10 ನಿಮಿಷದಲ್ಲಿ ಸಚಿವರು ಬರುತ್ತಾರೆ ಎಂದರು. ಸಭಾನಾಯಕರ ಹೇಳಿಕೆಗೆ ಕೆಂಡಾಮಂಡಲರಾದ ಸಭಾಪತಿಗಳು ಇದೇನು ಬೀಗರ ಮನೆಯಾ? ನಾಳೆಯಿಂದ ಕಡ್ಡಾಯ ಹಾಜರಿರುವ ಸಚಿವರು ಎನ್ನುವುದನ್ನೇ ತೆಗೆದುಬಿಡಿ ಎಂದು ಕಿಡಿಕಾರಿದರು.










