ಹಾವೇರಿ : ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಶೆಲ್ ದಾಳಿಗೆ ಬಲಿಯಾಗಿದ್ದ ಹಾವೇರಿಯ ಚಳಗೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಈ ಬಗ್ಗೆ ಮೃತ ನವೀನ ತಂದೆ ಶೇಖರಗೌಡ ಮಾಹಿತಿ ನೀಡಿದ್ದು, ಸೋಮವಾರ ಬೆಳಗ್ಗೆ ಚಳಗೇರಿ ಗ್ರಾಮದ ಮನೆಗೆ ಮೃತದೇಹ ಬರುವ ಮಾಹಿತಿ ದೊರೆತಿದೆ. ಮಗನ ಪಾರ್ಥೀವ ಶರೀರ ಮನೆಗೆ ಬಂದ ನಂತರ ಮನೆಯಲ್ಲಿ ಪೂಜೆ ಸಲ್ಲಿಸಿ ದಾವಣಗೆರೆಯ ಎಸ್ಎಸ್ ಮೆಡಿಕಲ್ ಕಾಲೇಜಿಗೆ ಮಗನ ಮೃತದೇಹ ನೀಡಲು ನಿರ್ಧರಿಸಿದ್ದೇವೆ. ಮೆಡಿಕಲ್ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಆಗಲೆಂದು ಈ ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ಬರಲಿದೆ. ಸೋಮವಾರ ಮುಂಜಾನೆ 3 ಗಂಟೆಗೆ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಮೃತದೇಹ ಬರಲಿದ್ದು, ಸಂಜೆ ಹೊತ್ತಿಗೆ ಹುಟ್ಟೂರು ತಲುಪುವ ಸಾಧ್ಯತೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.










