ಇಂದು ಸಂಜೆ ಸಚಿವ ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ : ಬಸವರಾಜ ಬೊಮ್ಮಾಯಿ.

79
firstsuddi

ಹುಬ್ಬಳ್ಳಿ : ಸಚಿವ ಕೆ ಎಸ್ ಈಶ್ವರಪ್ಪ ಅವರು ಇಂದು ಸಂಜೆ ರಾಜೀನಾಮೆ ನೀಡಲಿದ್ದಾರೆ. ಸ್ವಯಂಪ್ರೇರಣೆಯಿಂದ ಅವರು ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈಗಾಗಲೇ ಸಚಿವ ಈಶ್ವರಪ್ಪ ಅವರು ತೀರ್ಮಾನ ಮಾಡಿದ್ದಾರೆ. ನಿನ್ನೆ ರಾತ್ರಿ ಅವರ ಜತೆ ಮಾತನಾಡಿದ್ದೇನೆ. ಆದಷ್ಟು ಬೇಗ ಆರೋಪ ಮುಕ್ತನಾಗುವ ವಿಶ್ವಾಸ ಈಶ್ವರಪ್ಪ ಅವರಿಗಿದೆ. ಶೀಘ್ರ ತನಿಖೆ ಮಾಡಿಸಿ ಎಂದಿದ್ದಾರೆ. ಇಡೀ ಪ್ರಕರಣದ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ಆಗುತ್ತದೆ. ಪೊಲೀಸರು ತಮ್ಮ ಕೆಲಸವನ್ನ ಮಾಡಲು ಬಿಡಬೇಕು ಎಂದರು.

ಎಎಸ್ ಅಧಿಕಾರಿಯ ಆತ್ಮಹತ್ಯೆ ಪ್ರಕರಣದಲ್ಲಿ ಕೆ ಜೆ ಜಾರ್ಜ್ ಅವರ ಮೇಲೆ ಆರೋಪ ಬಂದಾಗ ರಾಜೀನಾಮೆ ಪಡೆದಿದ್ದರು. ರಾಜ್ಯ ಪೊಲೀಸರು, ಸಿಬಿಐ ಅವರನ್ನು ಬಂಧಿಸಿರಲಿಲ್ಲ. ವಿರೋಧ ಪಕ್ಷದವರು ತನಿಖಾಧಿಕಾರಿ, ಜಡ್ಜ್ ಆಗುವ ಅವಶ್ಯಕತೆ ಇಲ್ಲ. ಈ ಪ್ರಕರಣದಲ್ಲಿ ಸರ್ಕಾರಕ್ಕೆ ಹಿನ್ನಡೆ, ಮುನ್ನಡೆ ಅನ್ನೊ ಮಾತೇ ಇಲ್ಲ. ತನಿಖೆಯಿಂದ ಸತ್ಯ ಹೊರ ಬರುತ್ತೆ ಎಂದರು.