ಬೆಂಗಳೂರು : ಪ್ರತಿ ವರ್ಷವೂ ಎಸ್ಎಸ್ಎಲ್ಸಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಲೋಪಗಳು ಹೆಚ್ಚಾಗಿ ಕಂಡು ಬರುತ್ತಿತ್ತು. ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆ ಆಗುತ್ತಿತ್ತು. ಇದೀಗ ಇದನ್ನು ಸರಿಪಡಿಸಲು ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಮಾಡಿದ್ದು, ಈ ಬಾರಿ ಶಿಕ್ಷಕರು ಮೌಲ್ಯಮಾಪನದಲ್ಲಿ ಲೋಪ ಮಾಡಿದರೆ ಅಂತಹ ಶಿಕ್ಷಕರನ್ನು ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನು ನೀಡಿದೆ.
ಒಬ್ಬ ವಿದ್ಯಾರ್ಥಿಗೂ ಅನ್ಯಾಯ ಆಗಬಾರದು ಎಂದು ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ಕಪ್ಪು ಪಟ್ಟಿಯ ಜೊತೆಗೆ ದಂಡದ ಪ್ರಮಾಣವನ್ನು ಇಲಾಖೆ ಹೆಚ್ಚಳ ಮಾಡಿದೆ. ಮೌಲ್ಯಮಾಪನ ಲೋಪ ಮಾಡುವ ಶಿಕ್ಷಕರಿಗೆ 2 ಸಾವಿರ ರೂಪಾಯಿವರೆಗೂ ದಂಡ ವಿಧಿಸಲು ನಿರ್ಧಾರ ಮಾಡಿದೆ. ಜೊತೆಗೆ ಮುಂದಿನ ವರ್ಷದ ಮೌಲ್ಯಮಾಪನ ಕೆಲಸದಿಂದಲೂ ಇಂತಹ ಶಿಕ್ಷಕರನ್ನ ಕೈ ಬಿಡಲು ಎಸ್ಎಸ್ಎಲ್ಸಿ ಬೋರ್ಡ್ ನಿರ್ಧರಿಸಿದೆ.
ಈ ವರ್ಷದ ಎಸ್ಎಸ್ಎಲ್ಸಿ ಮೌಲ್ಯಮಾಪನ ಪ್ರಕ್ರಿಯೆ ಏಪ್ರಿಲ್ 21ರಿಂದ ಪ್ರಾರಂಭ ಆಗಲಿದ್ದು, ಮೌಲ್ಯಮಾಪನಕ್ಕೆ 60 ಸಾವಿರ ಶಿಕ್ಷಕರನ್ನು ಎಸ್ಎಸ್ಎಲ್ಸಿ ಬೋರ್ಡ್ ನಿಯೋಜನೆ ಮಾಡಿದೆ.










