ಹಿಂದಿ ರಾಷ್ಟ್ರ ಭಾಷೆ: ಕಿಚ್ಚ ಸುದೀಪ್-ಅಜಯ್ ದೇವಗನ್ ಮಧ್ಯೆ ಟ್ವೀಟ್ ವಾರ್! ಶುರುವಾಗಿದ್ದು ಹೇಗೆ?

68
firstsuddi

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ‘ಹಿಂದಿ ರಾಷ್ಟ್ರಭಾಷೆ’ ಎಂಬ ವಿಚಾರಕ್ಕೆ ಟ್ವಿಟ್ಟರ್ ನಲ್ಲಿ ದೊಡ್ಡ ಯುದ್ಧವೇ ನಡೆದಿದೆ. ಈ ಟ್ವಿಟ್ ವಾರ್ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಇತ್ತ ಕಿಚ್ಚನ ಬೆಂಬಲಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ನಟಿ ರಮ್ಯಾ, ಆಶಿಕಾ ರಂಗನಾಥ್, ನಟ ನಿನಾಸಂ ಸತೀಶ್ ಸೇರಿದಂತೆ ಹಲವರು ನಿಂತಿದ್ದಾರೆ. ಅಂದಹಾಗೆ ಮೊದಲು ವಿವಾದ ಉಂಟಾಗಿದ್ದು ಹೇಗೆ? ಈಗ ಈ ವಿವಾದ ಎಲ್ಲಿಗೆ ಬಂದು ನಿಂತಿದೆ? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಕಳೆದ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ್ದ ಸ್ಯಾಂಡಲ್ವುಡ್ ನಟ ಸುದೀಪ್, ‘ಕನ್ನಡ ಸಿನಿಮಾ ಹಾಗೂ ಸೌತ್ ಇಂಡಿಯಾ ಸಿನಿಮಾಗಳು ಪ್ಯಾನ್ ಇಂಡಿಯಾ ಹಿಟ್ ಆಗುತ್ತಿದೆ. ಆದರೆ ಹಿಂದಿ ಸಿನಿಮಾಗಳು ಸೌತ್ ನಲ್ಲಿ ಯಶಸ್ಸು ಪಡೆಯಲು ಹೆಣಗಾಡುತ್ತಿವೆ. ಸೌತ್ ಇಂಡಿಯಾ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿವೆ, ಆದರೆ ಹಿಂದಿ ಸಿನಿಮಾಗಳು ತಮಿಳು, ತೆಲುಗಿನಲ್ಲಿ ಡಬ್ ಆಗುತ್ತಿದೆ. ಹೀಗಾಗಿ ಹಿಂದಿ ಇನ್ನು ಮುಂದೆ ರಾಷ್ಟ್ರಭಾಷೆಯಲ್ಲ’ ಅಂತ ಹೇಳಿದ್ದರು.

ಸುದೀಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಿವುಡ್ ನಟ ಅಜಯ್ ದೇವಗನ್, “ಸಹೋದರ ಕಿಚ್ಚ ಸುದೀಪ್, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವೇ? ಅಲ್ಲ ಎಂದಾದರೆ ನೀವು ನಿಮ್ಮ ಮಾತೃಭಾಷೆಯ ಚಲನಚಿತ್ರಗಳನ್ನು ಹಿಂದಿಯಲ್ಲಿ ಏಕೆ ಡಬ್ ಮಾಡಿ, ಬಿಡುಗಡೆ ಮಾಡುತ್ತೀರಿ? ಅಂತ ಪ್ರಶ್ನಿಸಿದ್ದರು. ಅಲ್ಲದೇ, “ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರೀಯ ಭಾಷೆಯಾಗಿತ್ತು, ಮತ್ತು ಯಾವಾಗಲೂ ಅದು ರಾಷ್ಟ್ರ ಭಾಷೆಯಾಗಿಯೇ ಇರುತ್ತದೆ. ಜನ ಗಣ ಮನ…” ಅಂತ ಟ್ವೀಟ್ ಮಾಡಿದ್ದರು.

ಅಜಯ್ ದೇವಗನ್ ಮಾಡಿರುವ ಟ್ವೀಟ್ ಗೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಹಲೋ ಅಜಯ್ ದೇವಗನ್ ಸರ್, ನಾನು ಆ ಸಾಲು ಹೇಳಿರುವ ಹಿನ್ನೆಲೆಗೂ ಅದು ನಿಮ್ಮನ್ನು ತಲುಪಿರುವುದಕ್ಕೂ ತುಂಬಾ ವ್ಯತ್ಯಾಸವಿದೆ. ನಿಮ್ಮನ್ನು ಖುದ್ದಾಗಿ ಭೇಟಿಯಾದಾಗ ಈ ಬಗ್ಗೆ ನಾನು ಚರ್ಚೆ ಮಾಡುತ್ತೇನೆ. ನಾನು ಆ ರೀತಿಯಾಗಿ ಹೇಳಿರುವುದು ಯಾರನ್ನೋ ನೋಯಿಸಲು ಅಥವಾ ಇನ್ಯಾರೊಂದಿಗೆ ವಾದ ಮಾಡಲು ಅಲ್ಲ. ನಾನೇಕೆ ಹಾಗೆ ಮಾಡಲಿ? ಎಂದಿದ್ದಾರೆ. ಇದರ ಜೊತೆಗೆ, ಈ ದೇಶದಲ್ಲಿರುವ ಎಲ್ಲ ಭಾಷೆಗಳನ್ನೂ ನಾನು ಗೌರವಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡೋಣ ಎಂದಿದ್ದಾರೆ.

ನೀವು ಹಿಂದಿಯಲ್ಲಿ ಕಳುಹಿಸಿರುವ ಟೆಕ್ಸ್ಟ್ ನನಗೆ ಅರ್ಥವಾಯಿತು. ನಾವೆಲ್ಲರನ್ನೂ ಗೌರವಿಸಿದ್ದೇವೆ, ಪ್ರೀತಿಸುತ್ತೇವೆ. ಜೊತೆಗೆ ಹಿಂದಿಯನ್ನು ಕಲಿತಿದ್ದೇವೆ. ತಪ್ಪಲ್ಲ ಸರ್, ಆದರೆ ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿದ್ರೆ ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯಪಡುತ್ತಿದ್ದೆ! ನಾವೆಲ್ಲರೂ ಭಾರತಕ್ಕೆ ಸೇರಿದವರಲ್ಲವೇ ಸರ್ ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಉತ್ತರಿಸಿರುವ ಅಜಯ್ ದೇವಗನ್ , ತಪ್ಪು ತಿಳುವಳಿಕೆಯಿಂದಾಗಿ ಇಷ್ಟೆಲ್ಲ ಆಯಿತು. ಈ ವಿಷಯವನ್ನು ತಿಳಿಗೊಳಿಸಿದ್ದಕ್ಕೆ ಧನ್ಯವಾದಗಳು ಸ್ನೇಹಿತ ಸುದೀಪ್. ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ಮತ್ತು ಪ್ರತಿಯೊಬ್ಬರೂ ನಮ್ಮ ಭಾಷೆಯನ್ನು ಗೌರವಿಸಬೇಕು ಎಂದು ನಿರೀಕ್ಷಿಸುತ್ತೇವೆ. ಬಹುಶಃ ಅನುವಾದದಲ್ಲಿ ಏನೋ ಮಿಸ್ ಆಗಿರಬಹುದು’ ಎಂದು ಅಜಯ್ ದೇವಗನ್ ಟ್ವಿಟ್ ಮಾಡುವ ಮೂಲಕ ಈ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ.